ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ: ದೇಶದ ರಾಜ್ಯಗಳ ಹಣಕಾಸಿನ ಪರಿಸ್ಥಿತಿ ಹೇಗಿದೆ? - Financial crisis in Indian states

ಕೊರೊನಾ ಪರಿಣಾಮದಿಂದಾಗಿ ಕೇಂದ್ರಕ್ಕಿಂತ ಹೆಚ್ಚಾಗಿ ರಾಜ್ಯ ಸರಕಾರಗಳ ಆರ್ಥಿಕ ಮುಂಗಡ ಪತ್ರವು ಹೆಚ್ಚು ಬಾಧಿತವಾಗಿದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಕಳೆದ ವಿತ್ತೀಯ ವರ್ಷದಲ್ಲಿ ವ್ಯಾಟ್‌ ಮತ್ತು ಮಾರಾಟ ತೆರಿಗೆಯಿಂದ ರೂ.3.26 ಲಕ್ಷ ಕೋಟಿ, ಅಬಕಾರಿ ತೆರಿಗೆಯಿಂದ ರೂ.1.75 ಲಕ್ಷ ಕೋಟಿ ಹಾಗೂ ಮುದ್ರಾಂಕ ಮತ್ತು ನೋಂದಣಿಯಿಂದ ರೂ.1.4ಲಕ್ಷ ಕೋಟಿ ಆದಾಯ ಬರಬಹುದು ಎಂದು ರಾಜ್ಯ ಸರ್ಕಾರಗಳು ಅಂದಾಜಿಸಿದ್ದವು!. ಆದರೆ, ಕೊರೊನಾ ಪರಿಣಾಮದಿಂದಾಗಿ, ಈ ಎಲ್ಲ ಅಂದಾಜುಗಳು ಶೂನ್ಯವಾಗಿವೆ.

How about States Finances
ರಾಜ್ಯಗಳ ಹಣಕಾಸಿನ ಪರಿಸ್ಥಿತಿ

By

Published : May 7, 2020, 12:54 PM IST

ಕೊರೊನಾ ಸಾಂಕ್ರಾಮಿಕ ನಮ್ಮೆದುರು ಅನಾವರಣಗೊಳಿಸುತ್ತಿರುವ ವಿನಾಶವು ವಿಶ್ವ ಯುದ್ಧದ ಪ್ರಮಾಣದಲ್ಲಿದೆ! ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವ ದೇಶಗಳು ಬೃಹತ್‌ ಜೀವ ನಷ್ಟವನ್ನು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ದೇಶಗಳು ತೀವ್ರ ಪ್ರಮಾಣದ ಆರ್ಥಿಕ ನಷ್ಟವನ್ನು ಅನುಭವಿಸಿವೆ. ಅವುಗಳ ಒಟ್ಟು ರಾಷ್ಟ್ರೀಯ ಉತ್ಪಾದಕತೆ ಆಘಾತಕಾರಿ ಎನಿಸುವಂತಹ ಆಳಕ್ಕೆ ಕುಸಿದಿದೆ.

ಮನುಷ್ಯರ ಜೀವಕ್ಕೆ ಮಹತ್ವ ನೀಡಿದ ಭಾರತ, ಆರು ವಾರಗಳ ಹಿಂದೆ ದೇಶಾದ್ಯಂತ ದಿಗ್ಬಂಧನ ವಿಧಿಸಿತು. ಇದರಿಂದಾಗಿ ದೇಶದ ಆರ್ಥಿಕತೆ ಅಕ್ಷರಶಃ ತೀವ್ರ ನಿಗಾ ಘಟಕವನ್ನು ಸೇರಿದಂತಾಯಿತು. ಸಾರ್ವಜನಿಕರ ಆರೋಗ್ಯ ರಕ್ಷಣೆಯು ಸರ್ಕಾರಗಳ ಸಂವಿಧಾನಬಾಧ್ಯ ಹೊಣೆಗಾರಿಕೆಯಾಗಿದೆ. ತಮ್ಮೆಲ್ಲ ಶಕ್ತಿಯನ್ನು ಬಳಸಿಕೊಂಡು ಕೋವಿಡ್‌ನಿಂದ ಜನರನ್ನು ರಕ್ಷಿಸಲು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿರುವಾಗ, ವಿತ್ತೀಯ ಕೊರತೆಯ ಮಹಾದುರಂತ ನಿಜವಾದ ಸವಾಲಾಗಿ ಗೋಚರಿಸುತ್ತಿದೆ!

ರಾಜ್ಯಗಳು ತಾವೇ ಸಂಗ್ರಹಿಸುತ್ತಿರುವ ತೆರಿಗೆ ಆದಾಯದ ಪ್ರಮಾಣ ಶೇಕಡಾ 46 ಹಾಗೂ ತೆರಿಗೆಯೇತರ ಆದಾಯ ಪ್ರಮಾಣ ಶೇಕಡಾ 8; ಉಳಿದೆಲ್ಲ ಪಾಲು ಕೇಂದ್ರ ತೆರಿಗೆಗಳು (ಶೇಕಡಾ26) ಮತ್ತು ಅನುದಾನಗಳ (ಶೇಕಡಾ 21) ರೂಪದಲ್ಲಿರುತ್ತದೆ. ರಾಜ್ಯ ಸರ್ಕಾರಗಳ ಪ್ರಮುಖ ಆದಾಯ ಮೂಲಗಳಾದ, ಎಸ್‌ಜಿಎಸ್‌ಟಿ (ಶೇಕಡಾ 39.9), ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್‌ (ಶೇಕಡಾ 21.5, ಅಬಕಾರಿ (ಶೇಕಡಾ 11.9), ಮುದ್ರಾಂಕ-ನೋಂದಣಿ (ಶೇಕಡಾ 11.2)ಮತ್ತು ವಾಹನ ತೆರಿಗೆಗಳು (ಶೇಕಡಾ 5.7) ದಿಗ್ಬಂಧನದ ಅವಧಿಯಲ್ಲಿ ಬಂದ್‌ ಆಗಿವೆ.

ತೆಲಂಗಾಣ ರಾಜ್ಯದ ಕಳೆದ ತಿಂಗಳಿನ ಆದಾಯ ರೂ. 5000 ಕೋಟಿ ಆಗಿತ್ತು. ಆದರೆ, ವಾಸ್ತವವಾಗಿ ಸಂಗ್ರಹವಾಗಿದ್ದು ರೂ.500 ಕೋಟಿ ಮಾತ್ರ! ಉತ್ತರ ಪ್ರದೇಶ ಸರ್ಕಾರ ಏಪ್ರಿಲ್‌ ತಿಂಗಳಿನಲ್ಲಿ ರೂ.2284 ಕೋಟಿ ಆದಾಯವನ್ನು ಸ್ವೀಕರಿಸಿದೆ. ಆದರೆ, ಸಂಬಳ ಹಾಗೂ ಭತ್ಯೆಗಳಿಗಾಗಿ ಅದಕ್ಕೆ ಬೇಕಿರುವುದು ರೂ.12,000ಕೋಟಿ! ಆದಾಯ ಮತ್ತು ವೆಚ್ಚದ ನಡುವೆ ಆಗದ ಹೊಂದಾಣಿಕೆಯಿಂದ ಅಕ್ಷರಶಃ ನಜ್ಜುಗುಜ್ಜಾಗಿರುವ ರಾಜ್ಯ ಸರ್ಕಾರಗಳು, ಕೇಂದ್ರ ತಮ್ಮ ನೆರವಿಗೆ ಬರಬೇಕು ಹಾಗೂ ಇಂತಹ ಯುದ್ಧ ಕಾಲದ ಪರಿಸ್ಥಿತಿಯನ್ನು ನಿಭಾಯಿಸಲು ಆರ್ಥಿಕ ನೆರವು ನೀಡಬೇಕೆಂದು ನಿರೀಕ್ಷಿಸುವುದು ಸಹಜವೇ ಆಗಿದೆ. ಮುಂಗಡಪತ್ರದ ಅಂದಾಜುಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಿಂದ ಬಂದಿರುವ ಬಡ ಆದಾಯದಿಂದಾಗಿ, ರಾಜ್ಯಗಳಿಗೆ ನೀಡಬೇಕಿರುವ ಅನುದಾನದಲ್ಲಿ ಅಂದಾಜು ರೂ. 2 ಲಕ್ಷ ಕೋಟಿ ಕೊರತೆಯಾಗಿರುವುದು ಕಳವಳ ಮೂಡಿಸುವಂಥದ್ದು. ಈ ವಿತ್ತೀಯ ಸಂಕಷ್ಟದಿಂದ ರಾಜ್ಯಗಳನ್ನು ಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ.

ಕಳೆದ ಹಲವಾರು ದಶಕಗಳಿಂದ ಸಹಕಾರ ಒಕ್ಕೂಟ ಮಾದರಿಯು ಭಾರತೀಯ ಆರ್ಥಿಕತೆಯ ಲಕ್ಷಣವಾಗಿದೆ. ಆದರೆ, ಹಣಕಾಸು ಸ್ವಾಯತ್ತತೆ ಎಂಬುದು ರಾಜ್ಯಗಳ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. ರಾಜ್ಯಗಳಿಗೆ ಶೇಕಡಾ 42 ರಷ್ಟು ಅನುದಾನ ಹಂಚಿಕೆಯಾಗಬೇಕೆಂದು ಹದಿನಾಲ್ಕನೇ ಹಣಕಾಸು ಪರಿಷತ್‌ ಮತ ನೀಡಿದ್ದಾಗ್ಯೂ, ಆ ಪ್ರಮಾಣದಲ್ಲಿ ಅನುದಾನ ಹರಿದು ಬಂದಿದ್ದೇ ಇಲ್ಲ. 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಕಾಯಿದೆಯಡಿ, ತಮ್ಮ ಆಧೀನದಲ್ಲಿದ್ದ ತೆರಿಗೆ ಅಧಿಕಾರದ ಬಹುಪಾಲನ್ನು ರಾಜ್ಯಗಳು ಜಿಎಸ್‌ಟಿ ಪರಿಷತ್‌ಗೆ ವರ್ಗಾಯಿಸಿವೆ. ಹೊಸ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಹದಿನೈದನೇ ಹಣಕಾಸು ಆಯೋಗವು ಏನು ಮಾಡುತ್ತದೆ ಎಂಬುದು ಅಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ 2003ರ ವಿತ್ತೀಯ ಹೊಣೆಗಾರಿಕೆ ಮತ್ತು ಮುಂಗಡಪತ್ರ ನಿರ್ವಹಣೆ (ಫಿಸ್ಕಲ್‌ ರೆಸ್ಪಾನ್ಸಿಬಿಲಿಟಿ ಅಂಡ್‌ ಬಜೆಟ್‌ ಮ್ಯಾನೇಜ್‌ಮೆಂಟ್‌ -ಎಫ್‌ಆರ್‌ಬಿಎಂ) ಕಾಯಿದೆಯಡಿ ವಿಧಿಸಿರುವ ಸಾಲ ಬಾಧ್ಯತೆಗಳ ಪ್ರಕಾರ ನಡೆದುಕೊಳ್ಳುವುದರ ಹೊರತು ರಾಜ್ಯ ಸರ್ಕಾರಗಳಿಗೆ ಬೇರೆ ದಾರಿಯೇ ಇಲ್ಲ.

ಕೊರೊನಾ ಪರಿಣಾಮದಿಂದಾಗಿ ಕೇಂದ್ರಕ್ಕಿಂತ ಹೆಚ್ಚಾಗಿ ರಾಜ್ಯ ಸರಕಾರಗಳ ಆರ್ಥಿಕ ಮುಂಗಡಪತ್ರವು ಹೆಚ್ಚು ಬಾಧಿತವಾಗಿದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಕಳೆದ ವಿತ್ತೀಯ ವರ್ಷದಲ್ಲಿ ವ್ಯಾಟ್‌ ಮತ್ತು ಮಾರಾಟ ತೆರಿಗೆಯಿಂದ ರೂ.3.26 ಲಕ್ಷ ಕೋಟಿ, ಅಬಕಾರಿ ತೆರಿಗೆಯಿಂದ ರೂ.1.75 ಲಕ್ಷ ಕೋಟಿ ಹಾಗೂ ಮುದ್ರಾಂಕ ಮತ್ತು ನೋಂದಣಿಯಿಂದ ರೂ.1.4ಲಕ್ಷ ಕೋಟಿ ಆದಾಯ ಬರಬಹುದು ಎಂದು ರಾಜ್ಯ ಸರ್ಕಾರಗಳು ಅಂದಾಜಿಸಿದ್ದವು!. ಆದರೆ, ಕೊರೊನಾ ಪರಿಣಾಮದಿಂದಾಗಿ, ಈ ಎಲ್ಲ ಅಂದಾಜುಗಳು ಶೂನ್ಯವಾಗಿವೆ. ತಮ್ಮ ನಿತ್ಯದ ವೆಚ್ಚಗಳನ್ನು ನಿಭಾಯಿಸುವುದು ಹಾಗೂ ಕೊರೊನಾ ಸಂಕಷ್ಟವನ್ನು ಎದುರಿಸಲು ಬೇಕಾದ ಹಣವನ್ನು ಹೊಂದಿಸುವುದು ಹೇಗೆಂಬುದು ತೋಚದೇ ರಾಜ್ಯ ಸರ್ಕಾರಗಳು ದಿಕ್ಕೆಟ್ಟು ಕೂತಿವೆ.

ಕೇಂದ್ರದಿಂದ ಬರಬೇಕಿರುವ ಜಿಎಸ್‌ಟಿ ಬಾಕಿಗಾಗಿ ಕೇರಳ ಸರ್ಕಾರ ತೀವ್ರ ಪ್ರಯತ್ನ ಮಾಡುತ್ತಿದೆ. ವಿತ್ತೀಯ ಹೊಂದಾಣಿಕೆ ಮಿತಿಯನ್ನು ಆರ್‌ಬಿಐ ತಾತ್ಕಾಲಿಕವಾಗಿ ಹೆಚ್ಚಿಸಿದ್ದರೂ, ಅವು ರಾಜ್ಯಗಳಿಗೆ ಪರಿಣಾಮಕಾರಿ ಪರಿಹಾರ ನೀಡದೇ ಹೋಗಬಹುದು. ಹಲವಾರು ರಾಜ್ಯಗಳು ಎಫ್‌ಆರ್‌ಬಿಎಂ ಕಾಯಿದೆ ತಿದ್ದುಪಡಿಗೆ ಆಗ್ರಹಿಸುತ್ತಿದ್ದು, ಹೆಚ್ಚುವರಿ ಶೇಕಡಾ 2ರಷ್ಟು ಸಾಲ ನೀಡುವಂತೆ ಒತ್ತಾಯಿಸುತ್ತಿವೆ. ರಾಜ್ಯಗಳ ಆರ್ಥಿಕ ಯೋಗಕ್ಷೇಮವನ್ನು ಕೇಂದ್ರ ಸರಕಾರ ಖಾತರಿಪಡಿಸಿದಾಗ ಮಾತ್ರ ಕೋವಿಡ್‌ ವಿರುದ್ಧ ಅವು ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗಬಲ್ಲದು!

ABOUT THE AUTHOR

...view details