ನವದೆಹಲಿ:ಬಿಲ್ ಪಾವತಿ ಮಾಡದ ಕಾರಣಆಸ್ಪತ್ರೆಯ ಅಧಿಕಾರಿಗಳು ರೋಗಿಯ ಮೃತದೇಹವನ್ನು ಕುಟುಂಬದವರಿಗೆ ನೀಡಲು ನಿರಾಕರಿಸಿದ ಘಟನೆ ನಡೆದಿದೆ.
ಇನ್ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸಸ್ (ಐಎಲ್ಬಿಎಸ್) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮೃತದೇಹವನ್ನು ತಮ್ಮೊಂದಿಗೆ ಕೊಂಡೊಯ್ಯಲು ಕುಟುಂಬವು 3.5 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಆಸ್ಪತ್ರೆ ಹೇಳಿದೆ.
ಮೃತ ವ್ಯಕ್ತಿಯ ಮಗಳು ಸಹಾಯಕ್ಕಾಗಿ ಪೊಲೀಸರನ್ನು ಕರೆದರೂ ಅವರು ಕೂಡಾ ಈ ವಿಷಯದಲ್ಲಿ ಯಾವುದೇ ಸಹಕಾರ ನೀಡಲು ನಿರಾಕರಿಸಿದರು ಎನ್ನಲಾಗಿದೆ.
ಬಿಹಾರದ ಗೋಪಾಲಗಂಜ್ ನಿವಾಸಿ ಆನಂದ್ ಕುಮಾರ್ ಪಾಂಡೆ ತಮ್ಮ ಮಗಳೊಂದಿಗೆ ಪಿತ್ತಜನಕಾಂಗದ ಚಿಕಿತ್ಸೆಗಾಗಿ ಎರಡು ತಿಂಗಳ ಹಿಂದೆ ದೆಹಲಿಗೆ ಬಂದಿದ್ದರು. ಅವರು ಆಸ್ಪತ್ರೆಯಲ್ಲಿ ಪಿತ್ತಜನಕಾಂಗದ ಕಸಿಯ ಚಿಕಿತ್ಸೆಯಲ್ಲಿರುವಾಗ ಕುಟುಂಬವು 22 ಲಕ್ಷ ರೂ. ಪಾವತಿ ಮಾಡಿತ್ತು.
ಚಿಕಿತ್ಸೆಯ ವೆಚ್ಚವನ್ನು ಭರಿಸಲು ನಾವು ಈಗಾಗಲೇ ನಮ್ಮ ಆಸ್ತಿ ಮತ್ತು ಮೌಲ್ಯಯುತ ವಸ್ತುಗಳನ್ನು ಮಾರಾಟ ಮಾಡಿದ್ದೇವೆ. ಮೃತದೇಹವನ್ನು ಊರಿಗೆ ಕೊಂಡೊಯ್ಯಲು ನಮ್ಮ ಬಳಿ ಸಾಕಷ್ಟು ಹಣವೂ ಇಲ್ಲ. ನಾನು ಹಣವನ್ನು ಹೇಗೆ ಪಾವತಿಸಲಿ? ನನ್ನಲ್ಲಿ ನಯಾ ಪೈಸೆಯೂ ಇಲ್ಲ ಎಂದು ಮೃತವ್ಯಕ್ತಿಯ ಮಗಳು ಹೇಳಿದ್ದಾರೆ.
ಇಂತಹ ಪ್ರಕರಣಗಳು ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತವೆ. ಕುಟುಂಬವು ಬಿಲ್ ಪಾವತಿಸಲು ವಿಫಲವಾದ ಕಾರಣ ದೆಹಲಿಯ ಸರ್ಕಾರಿ ಆಸ್ಪತ್ರೆಯೊಂದು ಮೃತದೇಹವನ್ನು ಹಿಂದಿರುಗಿಸಲು ನಿರಾಕರಿಸುತ್ತಿದೆ. ಆನಂದ್ ಕುಮಾರ್ ಬಿಪಿಎಲ್ ಕಾರ್ಡುದಾರರಾಗಿದ್ದರೂ ಕುಟುಂಬವು ಈವರೆಗೆ 22 ಲಕ್ಷ ರೂ. ಪಾವತಿಸಿದೆ ಎಂದು ಸಾಮಾಜಿಕ ನ್ಯಾಯಶಾಸ್ತ್ರಜ್ಞ ಅಶೋಕ್ ಅಗರ್‌ವಾಲ್ ಹೇಳಿದ್ದಾರೆ.
ಗಂಗಾರಾಮ್ ಆಸ್ಪತ್ರೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನ ತೀರ್ಪಿನ ಉದಾಹರಣೆಯನ್ನು ಉಲ್ಲೇಖಿಸಿದ ಅಗರ್‌ವಾಲ್, ಪಾವತಿ ಬಾಕಿ ಇದ್ದರೂ ಆಸ್ಪತ್ರೆಗಳು ರೋಗಿಯನ್ನು ಆಸ್ಪತ್ರೆಯಲ್ಲಿ ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ವಿಷಯದಲ್ಲಿ ದೆಹಲಿ ಸರ್ಕಾರ ಮತ್ತು ಪೊಲೀಸರು ಮಧ್ಯಪ್ರವೇಶಿಸಬೇಕು ಎಂದರು.
ಬಿಲ್ ಪಾವತಿಗಾಗಿ ಆಸ್ಪತ್ರೆಗಳು ರೋಗಿಗಳನ್ನು ಒತ್ತೆಯಾಳುಗಳಾಗಿಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು.