ಅಂಬಾಲಾ: ಭಾರತೀಯ ಸೇನೆಗೆ ಇಂದು ಅಧಿಕೃತವಾಗಿ ಸೇರ್ಪಡೆಯಾದ ರಫೇಲ್ ಯುದ್ಧ ವಿಮಾಣವು ಮೀರಜ್-2000 ಸೇವಾ ದಾಖಲೆಯನ್ನು ಮುರಿಯುವ ವಿಶ್ವಾಸವಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಅತ್ಯುನ್ನತ ಯುದ್ಧ ವಿಮಾನಗಳಾದ ರಫೇಲ್ ಫೈಟರ್ ಜೆಟ್ಗಳು 4.5ನೇ ತಲೆಮಾರಿನವುಗಳಾಗಿದ್ದು, ಅವುಗಳು ವಿಶ್ವದ ಅತ್ಯುತ್ತಮ ಪೈಲಟ್ಗಳನ್ನು ಹೊಂದಲಿವೆ. ನಮ್ಮ ಪೈಲಟ್ಗಳಿಂದಾಗಿ ಅವು ಯುದ್ಧಭೂಮಿಯಲ್ಲಿ ಮತ್ತಷ್ಟು ಮಾರಕವಾಗಲಿವೆ ಎಂದು ಧೋನಿ ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಮತ್ತೊಂದು ಟ್ವೀಟ್ ಮಾಡಿದ್ದು, SU30MKI ಯುದ್ಧ ವಿಮಾನಗಳು ನನ್ನ ಫೇವರಿಟ್ ಎಂದಿದ್ದಾರೆ.
ಇಂದು ರಫೇಲ್ ಯುದ್ಧ ವಿಮಾನಗಳನ್ನು ಹರಿಯಾಣದ ಅಂಬಾಲಾ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ನ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲಿ ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಇದೇ ವೇಳೆ ರಫೇಲ್ ಯುದ್ಧ ವಿಮಾನಗಳಿಗೆ ಸರ್ವ ಧರ್ಮ ಪೂಜಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗಿಯಾಗಿದ್ದರು.
ರಫೇಲ್ ಯುದ್ಧ ವಿಮಾನಗಳು ಸೇನೆಗೆ ಸೇರ್ಪಡೆಯಾಗುವ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಧೋನಿ ಸೆಪ್ಟೆಂಬರ್ 19ರಂದು ಐಪಿಎಲ್ನಲ್ಲಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯಲಿದ್ದಾರೆ. ಮೊದಲ ಪಂದ್ಯವನ್ನು ಮುಂಬೈ ವಿರುದ್ಧ ಆಡಲಿದ್ದಾರೆ.