ಕರ್ನಾಟಕ

karnataka

ETV Bharat / bharat

ಮತ್ತೆ ಮರ್ಯಾದಾ ಹತ್ಯೆ: ಅನ್ಯಜಾತಿ ಯುವಕನ ಪ್ರೀತಿಸಿ, ಗರ್ಭಧರಿಸಿದ ಯುವತಿ ಕೊಂದ ಪೋಷಕರು - ತೆಲಂಗಾಣ ಸುದ್ದಿ

ತೆಲಂಗಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ. ಡಿಗ್ರಿ ಓದುತ್ತಿದ್ದ ಯುವತಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಗರ್ಭವತಿಯಾಗಿದ್ದಳು. ಇದರಿಂದ ಕೋಪಗೊಂಡಿದ್ದ ಪೋಷಕರೇ ಆಕೆಯನ್ನು ಸಾಯಿಸಿದ್ದಾರೆ. ಮರ್ಯಾದೆಗೆ ಅಂಜಿ ಕೊಲೆ ಮಾಡಿರುವುದಾಗಿ ಪೋಷಕರು ಕೊಲೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ.

Honour killing
ಮತ್ತೆ ಮರ್ಯಾದಾ ಹತ್ಯೆ

By

Published : Jun 9, 2020, 2:49 PM IST

Updated : Jun 9, 2020, 3:22 PM IST

ಗದ್ವಾಲ್​(ತೆಲಂಗಾಣ): ರಾಜ್ಯ ಮತ್ತೊಂದು ಮರ್ಯಾದಾ ಹತ್ಯೆಗೆ ಸಾಕ್ಷಿಯಾಗಿದ್ದು, ರಾಜ್ಯಾದ್ಯಂತ ವ್ಯಾಪಕ ಚರ್ಚೆಗೊಳಗಾಗಿದೆ. ಅಂತರ್ಜಾತಿ ಯುವಕನನ್ನು ಪ್ರೀತಿಸಿ, ವಿವಾಹಕ್ಕೂ ಮುಂಚಿತವಾಗಿ ಗರ್ಭಧರಿಸಿದ್ದ ಯುವತಿಯನ್ನು ಪೋಷಕರೇ ಕೊಂದಿದ್ದಾರೆ.

ದಿವ್ಯಾ, ಸಾವನ್ನಪ್ಪಿದ ಯುವತಿ. ಗದ್ವಾಲ್ ಜಿಲ್ಲೆಯ ಜೋಗುಲಂಬಾದಲ್ಲಿ ವಾಸವಿರುವ ಯುವತಿ ಅದೇ ಊರಿನ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಮದುವೆಗೂ ಮುಂಚೆಯೇ ಗರ್ಭಿಣಿ ಸಹ ಆಗಿದ್ದಳು.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕಾಲೇಜಿನಲ್ಲಿ ಓದುತ್ತಿದ್ದ ದಿವ್ಯಾಗೆ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ಲಾಕ್‌ಡೌನ್​ಗಿಂತ ಎರಡು ದಿನ ಮುಂಚಿತವಾಗಿ ಯುವತಿ ಮನೆಗೆ ಬಂದಿದ್ದಳು. ಅನ್ಯ ಜಾತಿಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವುದು ಮಾತ್ರವಲ್ಲದೆ ಗರ್ಭಿಣಿಯಾಗಿರುವುದಕ್ಕೆ ಕೋಪಗೊಂಡ ಪೋಷಕರು, ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದರು. ಆದರೆ, ಗರ್ಭಪಾತಕ್ಕೆ ಯುವತಿ ನಿರಾಕರಿಸಿದ್ದಾಳೆ. ವಿವಾಹ ಆದರೆ ಅದೇ ಯುವಕನನ್ನು ಮದುವೆಯಾಗುವುದಾಗಿ ಹಟಕ್ಕೆ ಬಿದ್ದಿದ್ದಳು.

ಹೀಗಾಗಿ ಕೋಪಗೊಂಡ ಪೋಷಕರು, ದಿಂಬಿನಿಂದ ಒತ್ತಿ ಉಸಿರುಗಟ್ಟಿಸಿ ಯುವತಿಯನ್ನು ಕೊಲೆ ಮಾಡಿದ್ದಾರೆ. ನಂತರ ಹಠಾತ್ ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪಿರುವಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ.

ಈ ಸಂಬಂಧ ನಡೆದ ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ತಮ್ಮ ಇತರ ಇಬ್ಬರು ಹೆಣ್ಣುಮಕ್ಕಳ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರಬಾರದೆಂದು ಈ ರೀತಿ ಮಾಡಿರುವುದಾಗಿ ಸತ್ಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

Last Updated : Jun 9, 2020, 3:22 PM IST

ABOUT THE AUTHOR

...view details