ನವದೆಹಲಿ:ಕೇಂದ್ರ ಸರ್ಕಾರದ ಐತಿಹಾಸಿಕ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಇದೀಗ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಂದ ಮಂಡನೆಯಾಗಿದ್ದು, ಅದರ ಮೇಲೆ ಗಂಭೀರ ಸ್ವರೂಪದ ಚರ್ಚೆ ನಡೆಯುತ್ತಿದೆ.
ಈಗಾಗಲೇ ಲೋಕಸಭೆಯಲ್ಲಿ ಭರ್ಜರಿ ಬಹುಮತ ಹೊಂದಿರುವ ಕಾರಣಕ್ಕೆ ಈ ವಿಧೇಯಕ ಅನುಮೋದನೆಗೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಯೊಂದು ಭಾರತದಲ್ಲಿರುವ ಮುಸ್ಲಿಮರು ಯಾವುದೇ ಭಯಪಡುವ ಅಗತ್ಯವಿಲ್ಲ. ಸರ್ಕಾರ ಸಂವಿಧಾನ ಬದ್ಧವಾಗಿ ಕೆಲಸ ಮಾಡಲಿದೆ ಎಂದರು.
ಅಮಿತ್ ಶಾ,ಕೇಂದ್ರ ಗೃಹ ಸಚಿವ ಈ ಹಿಂದೆ ನಾವು ಪೌರತ್ವ ತಿದ್ದುಪಡಿ ಮಸೂದೆ ತರುವುದಾಗಿ ಈ ಹಿಂದಿನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ನಾವು ಉಲ್ಲೇಖ ಮಾಡಿದ್ದೆವು. ಈ ಮಸೂದೆಯಿಂದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ವಲಸೆ ಬಂದಿರುವ ಅಲ್ಪ ಸಂಖ್ಯಾತರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಈ ಕಾಯ್ದೆ ಮಂಡನೆಯಾಗಿರುವುದರಿಂದ ಕೋಟ್ಯಂತರ ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಸಹಕಾರಿಯಾಗಲಿದ್ದು, ಹಲವರ ಯಾತನೆಯ ಬದುಕು ಅಂತ್ಯಗೊಳ್ಳಲಿದೆ ಎಂದರು.
ಇದರಿಂದ ನಿರಾಶ್ರಿತರು ಗೌರವದಿಂದ ಬದುಕಲಿದ್ದು, ವೋಟ್ ಬ್ಯಾಂಕ್ಗಾಗಿ ಈ ವಿಧೇಯಕ ಮಂಡನೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಮಸೂದೆ ಕುರಿತು ನಿಮ್ಮನ್ನು ಯಾರೇ ಹೆದರಿಸಲು ಬಂದರೂ ನಾವು ಹೆದರಬೇಡಿ. ಸಂವಿಧಾನ, ಅಲ್ಪಸಂಖ್ಯಾತರ ಸಂಪೂರ್ಣ ರಕ್ಷಣೆಗಾಗಿ ಪ್ರಧಾನಿ ಮೋದಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಇದೀಗ ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆಯಲ್ಲಿ ಶೇ.20ರಷ್ಟು ಕಡಿಮೆಯಾಗಿದ್ದು, ಒಂದು ಅವರು ಹತ್ಯೆಯಾಗಿರಬಹುದು ಅಥವಾ ಭಾರತಕ್ಕೆ ಬಂದಿರಬಹುದು ಎಂಬ ಸಂಶಯ ಕೂಡ ಶಾ ಈ ವೇಳೆ ಹೇಳಿಕೊಂಡಿದ್ದಾರೆ.
ಈ ಮಸೂದೆ ಮಂಡನೆಯಿಂದ ನಾವು ಅಸ್ಸೋಂ ಹಕ್ಕುಗಳ ರಕ್ಷಣೆ ಮಾಡುತ್ತೇವೆ. ಅಲ್ಲಿನ ವಿದ್ಯಾರ್ಥಿ ಸಂಘಟನೆಗಳಿಗೆ ಎಲ್ಲ ರೀತಿಯ ಭರವಸೆ ನೀಡುತ್ತೇವೆ ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. ಇದರ ಜತೆಗೆ ಈಶಾನ್ಯ ರಾಜ್ಯಗಳಲ್ಲೂ ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.