ನವದೆಹಲಿ: ಕೋವಿಡ್-19 ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಅಖಿಲ ಭಾರತ ಆರೋಗ್ಯ ಸಂಸ್ಥೆ ಹೃಷಿಕೇಶ ಶಾಖೆ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜಂಟಿಯಾಗಿ ರಿಮೋಟ್ ಆರೋಗ್ಯ ಪರಿವೀಕ್ಷಣ ವ್ಯವಸ್ಥೆಯನ್ನು ಬಳಕೆಗೆ ತಂದಿದೆ. ಈ ವ್ಯವಸ್ಥೆಯ ಮೂಲಕ ರೋಗಿಗಳ ತಾಪಮಾನ, ನಾಡಿ ಮಿಡಿತ, ರಕ್ತದ ಆಮ್ಲಜನಕದ ಮಟ್ಟ ಮತ್ತು ಉಸಿರಾಟದ ಪ್ರಮಾಣವನ್ನು ವೈದ್ಯರು ಟೆಲಿ ಮೆಡಿಸಿನ್ ಮೂಲಕ ಮೇಲ್ವಿಚಾರಣೆ ಮಾಡುತ್ತಾರೆ. ಇದರ ಮೂಲಕ ಕೋವಿಡ್-19 ಸೋಂಕಿತರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಮಿತಿಮೀರಿದ ಒತ್ತಡವನ್ನು ಎದುರಿಸುತ್ತಿದ್ದಾರೆ. ಅವರ ಹೊರೆ ಕಡಿಮೆ ಮಾಡಲು, ಏಮ್ಸ್ ಮತ್ತು ಬಿಇಎಲ್ ಸಂಸ್ಥೆಗಳು ಈ ವ್ಯವಸ್ಥೆಯನ್ನು ರೂಪಿಸಿವೆ.
ಬಿಇಎಲ್ ನ ವಿಜ್ಞಾನಿಗಳು ಸಂವೇದಕಗಳ ಮೂಲಕ ತಾಪಮಾನ, ನಾಡಿ ಮಿಡಿತ ಮತ್ತು ಇತರ ನಿಯತಾಂಕಗಳನ್ನು ಕಂಡುಹಿಡಿಯುವ ‘ಅಪ್ಲಿಕೇಶನ್ ’ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಂವೇದಕಗಳ ಮೂಲಕ ದಾಖಲಿಸಲಾದ ಮಾಹಿತಿಯನ್ನು ವೈದ್ಯರಿಗೆ ರವಾನಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಒಂದು ಸೆನ್ಸಾರ್ ಅನ್ನು ಮಣಿಕಟ್ಟಿನ ಮೇಲೆ ಮತ್ತು ಇನ್ನೊಂದು ಹೃದಯದ ಹತ್ತಿರ ಇಡುವುದರಿಂದ ವೈದ್ಯರು ತಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ರೋಗಿಯ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಕೋವಿಡ್-19 ಶಂಕಿತರು ಆಸ್ಪತ್ರೆಗೆ ತಪಾಸಣೆಗಾಗಿ ಬಂದಾಗ ಅವರಿಗೆ ರಿಮೋಟ್ ಪರಿವೀಕ್ಷಣಾ ವ್ಯವಸ್ಥೆಯ ಸಂವೇದಕ ಕಿಟ್‌ಗಳನ್ನು ನೀಡಲಾಗುತ್ತದೆ. ಈ ಸಂವೇದಕ ಕಿಟ್ ಗಳನ್ನು ಬಳಸುವ ವಿಧಾನವನ್ನು ಕುಟುಂಬ ಸದಸ್ಯರಿಗೆ ತಿಳಿಸಲಾಗುವುದು. ಪರಿಣಾಮವಾಗಿ, ರೋಗಿಯ ಆಸ್ಸತ್ರೆ ಭೇಟಿಯನ್ನು ಕಡಿಮೆ ಮಾಡಿ ಆತ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುಬಹುದಾಗಿದೆ. ಈ ವ್ಯವಸ್ಥೆಯಿಂದಾಗಿ, ಕುಟುಂಬ ಸದಸ್ಯರ ರೋಗಿಯೊಂದಿಗಿನ ಸಂವಹನವನ್ನು ಸಹ ಕಡಿಮೆ ಮಾಡಬಹುದು.