ಲಂಡನ್:ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂ ದೇವಾಲಯದ ಮೇಲಿನ ವಿಧ್ವಂಸಕ ಕೃತ್ಯವನ್ನು ಲಂಡನ್ ಮೂಲದ ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತರ ನ್ಯಾಯಕ್ಕಾಗಿ ಹೋರಾಡುವ ವಕ್ತಾರ ಅನಿಲಾ ಗುಲ್ಜಾರ್ ಖಂಡಿಸಿದ್ದಾರೆ.
"ಬದಿನ್ನ ಸಿಂಧ್‌ನಲ್ಲಿ ಶ್ರೀರಾಮ ಮಂದಿರದಲ್ಲಿನ ಮೂರ್ತಿಯನ್ನು ಅ.10ರಂದು ಹಾಳುಗೆಡವಲಾಗಿದೆ. ಅಲ್ಲದೇ ಅಲ್ಲಿರುವ 428 ದೇವಾಲಯಗಳಲ್ಲಿ ಕೇವಲ 20 ಮಂದಿರಗಳು ಉಳಿದಿವೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಗುಲ್ಜಾರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸಿಂಧ್‌ನ ಬದಿನ್ ಪ್ರಾಂತ್ಯದ ಕರಿಯೊ ಘನ್ವಾರ್ ಪ್ರದೇಶದಲ್ಲಿ ಶನಿವಾರ ಹಿಂದೂ ದೇವಾಲಯವನ್ನು ಧ್ವಂಸ ಮಾಡಲಾಗಿದೆ. ಅಲ್ಲದೇ ಇದು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಶೋಚನೀಯ ಪರಿಸ್ಥಿತಿಗೆ ಮತ್ತೊಂದು ಉದಾಹರಣೆಯಾಗಿದೆ.
ಹಿಂದೂಗಳು ಪಾಕಿಸ್ತಾನದಲ್ಲಿ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವನ್ನು ಹೊಂದಿದ್ದಾರೆ. ಸಿಂಧ್ ಪ್ರದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ನಂಬಿಕೆಯನ್ನು ಘಾಸಿಗೊಳಿಸುವಂತ ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಅಷ್ಟೇ ಅಲ್ಲದೇ ಹಿಂದೂ ಹುಡುಗಿಯರನ್ನು ಅಪಹರಿಸಿ ಅತ್ಯಾಚಾರ ಮಾಡಲಾಗುತ್ತಿದೆ ಅಥವಾ ಅವರನ್ನು ಬಲವಂತವಾಗಿ ಮತಾಂತರಗೊಳಿಸುವ ಪ್ರಕರಣಗಳು ನಡೆಯುತ್ತಿವೆ ಎಂದು ಅವರು ಬರೆದುಕೊಂಡಿದ್ದಾರೆ.
ಮೇ ತಿಂಗಳಲ್ಲಿ ಪಂಜಾಬ್ ಪ್ರಾಂತ್ಯದ ಬಹವಾಲ್ಪುರ್ ನಗರದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದ ಜನರ ಮನೆಗಳನ್ನು ಧ್ವಂಸ ಮಾಡಿರುವುದನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (ಎಚ್‌ಆರ್‌ಸಿಪಿ) ಖಂಡಿಸಿತ್ತು.