ನವದೆಹಲಿ:ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಹಿಂಸಾಚಾರ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ವಿವಿ ಕ್ಯಾಂಪಸ್ನಲ್ಲಿ ಸಂಭವಿಸಿರುವ ಘಟನೆಯ ಹೊಣೆಯನ್ನು ಹಿಂದೂಪರ ಸಂಘಟನೆಯೊಂದು ಹೊತ್ತುಕೊಂಡಿದೆ.
ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೇಶಾದ್ಯಂತ ಖಡನೆ ವ್ಯಕ್ತವಾಗಿದ್ದು, ಈ ಘಟನೆಯ ಜವಾಬ್ದಾರಿಯನ್ನು 'ಹಿಂದೂ ರಕ್ಷಾ ದಳ' ಹೊತ್ತುಕೊಂಡಿದೆ.
ಹಿಂದೂ ರಕ್ಷಾ ದಳದ ರಾಷ್ಟ್ರೀಯ ಕನ್ವೀನರ್ ಪಿಂಕಿ ಚೌಧರಿ ಮಾತನಾಡಿ, 'ಕಳೆದ ಹಲವಾರು ವರ್ಷಗಳಿಂದ ಜೆಎನ್‌ಯುನಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಾವು ಸಹಿಸಲಾರೆವು. ಯಾರಾದರೂ ಅಂತಹ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಅವರು ನಮ್ಮಿಂದ ಅದೇ ರೀತಿಯ ಪ್ರತ್ಯುತ್ತರ ಪಡೆಯುತ್ತಾರೆ' ಎಂದು ಹೇಳಿದರು.