ನವದೆಹಲಿ: ಚೀನಾದೊಂದಿಗಿನ ಗಡಿ ಸಮಸ್ಯೆಗಳ ಕುರಿತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್, ಚೀನಾ ಒಳನುಸುಳುವಿಕೆ ಬಗ್ಗೆ ಸುಳ್ಳು ಹೇಳುವವರು ನಿಜವಾದ ದೇಶಭಕ್ತರಲ್ಲ ಎಂದು ಕಿಡಿಕಾರಿದ್ದಾರೆ.
"ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ಬಗೆಗಿನ ಸತ್ಯ ಮರೆಮಾಚಿ ಭಾರತದ ಭೂಮಿಯನ್ನು ಕಬಳಿಸಲು ಚೀನಾಗೆ ಅವಕಾಶ ನೀಡುವುದು ರಾಷ್ಟ್ರ ವಿರೋಧಿ ನಡವಳಿಕೆ. ಅದನ್ನು ಜನರ ಗಮನಕ್ಕೆ ತರುವುದೇ ನಿಜವಾದ ದೇಶಭಕ್ತಿ" ಎಂದು ರಾಹುಲ್ ಗಾಂಧಿ ತಮ್ಮ ಸರಣಿಯಲ್ಲಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
'ಚೀನಾ ಕುರಿತು ಕಠಿಣ ಪ್ರಶ್ನೆಗಳು'(Tough questions on China) ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಮಾತನಾಡಿರುವ ಕೇರಳದ ವಯನಾಡಿನ ಕಾಂಗ್ರೆಸ್ ಸಂಸದ, " ಒಬ್ಬ ಭಾರತೀಯನಾಗಿ ನನ್ನ ಪ್ರಥಮ ಆದ್ಯತೆ ನನ್ನ ರಾಷ್ಟ್ರ ಮತ್ತು ಅದರ ಜನರು" ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗಾಂಧಿ, " ಚೀನಾ ನಮ್ಮ ಭೂಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಇದು ನನ್ನ ರಕ್ತ ಕುದಿಯುವಂತೆ ಮಾಡುತ್ತಿದೆ. ಬೇರೊಂದು ರಾಷ್ಟ್ರ ಅಷ್ಟೊಂದು ಸುಲಭವಾಗಿ ಹೇಗೆ ನಮ್ಮ ಭೂಪ್ರದೇಶಕ್ಕೆ ನುಗ್ಗುತ್ತದೆ?" ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ನಾನು ಉಪಗ್ರಹ ಫೋಟೋಗಳನ್ನು ನೋಡಿ ಈ ವಿಷಯದ ಬಗ್ಗೆ ತಿಳಿದುಕೊಂಡಿದ್ದೇನೆ. ಅಲ್ಲದೇ ಮಾಜಿ ಸೇನಾಧಿಕಾರಿಗಳೊಂದಿಗೂ ಮಾತನಾಡಿದ್ದೇನೆ. ನೀವು ರಾಜಕಾರಣಿಗಳಾಗಿ ನಾನು ಮೌನವಾಗಿರಬೇಕು ಮತ್ತು ನನ್ನ ಜನರಿಗೆ ಸುಳ್ಳು ಹೇಳಬೇಕೆಂದು ಬಯಸಬಹುದು. ಚೀನಿಯರು ಈ ದೇಶವನ್ನು ಪ್ರವೇಶಿಸಿಲ್ಲ ಎಂದು ನಾನು ಸುಳ್ಳು ಹೇಳಬೇಕೆಂದು ನೀವು ಬಯಸಬಹುದು. ಆದರೆ ನಾನು ಸುಳ್ಳು ಹೇಳುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.