ನವದೆಹಲಿ:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನವು ಹಿಂದೆಂದಿಗಿಂತಲೂ ತೀವ್ರ ಕುತೂಹಲ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಇದೇ ಸಂದರ್ಭದಲ್ಲಿ ಮಾತನಾಡಲಿದ್ದಾರೆ. ದಶಕಗಳ ಬಹು ಚರ್ಚಿತ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಆರ್ಟಿಕಲ್ 370 ಅನ್ನು ಭಾರತ ವಾಪಸ್ ಪಡೆದಿದೆ. ಇದೇ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಾಯಕರ ಭಾಷಣ ಹೇಗಿರಲಿದೆ ಎಂಬ ನಿರೀಕ್ಷೆ ಜಗತಿನಾದ್ಯಂತ ಮೂಡಿದೆ.
ಸೆಪ್ಟೆಂಬರ್ 27ರಂದು ನಡೆಯುವ ಈ ಅಧಿವೇಶನದಲ್ಲಿ ನಾಲ್ಕು ವರ್ಷಗಳ ಬಳಿಕ ಜಗತ್ತಿನ ಅಗ್ರ ನಾಯಕರು ಒಂದೇ ವೇದಿಕೆಯ ಮೇಲೆ ಆಸೀನರಾಗುತ್ತಿದ್ದಾರೆ. ಭಾರತ- ಪಾಕ್ ಸಂಬಂಧಿಸಿದಂತೆ ಪ್ರತಿ ಬಾರಿಯ ಅಧಿವೇಶನವು ಕಾಶ್ಮೀರ ಸಂಬಂಧಿತವಾಗಿ ಮಾತನಾಡಿದ್ದೇ ಹೆಚ್ಚು. ಕಳೆದ ನಾಲ್ಕು ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವೆಯಾಗಿದ್ದ ದಿ. ಸುಷ್ಮಾ ಸ್ವರಾಜ್ ಅವರು ಭಾಗವಹಿಸಿದ್ದರು. ಪ್ರತಿ ಅಧಿವೇಶನದಲ್ಲೂ ಪಾಕ್ ತೀಕ್ಷಣವಾಗಿ ತಿರುಗೇಟು ನೀಡಿದ್ದಾರೆ.
ಕಳೆದ ಐದು ಯುಎನ್ಜಿಎ ಸಮಾವೇಶದಲ್ಲಿ ಏನು ನಡೆದಿತ್ತು ಎಂಬುದರ ಮಾಹಿತಿ ಇಲ್ಲಿದೆ.
2014ರ 69ನೇ ಯುಎನ್ಜಿಎ
ತಲೆಮಾರುಗಳಿಂದ ಕಾಶ್ಮೀರಿಗಳು ತಮ್ಮ ಮೂಲ ಹಕ್ಕುಗಳಿಗಾಗಿ ಹಿಂಸೆ ಮತ್ತು ದಬ್ಬಾಳಿಕೆಯೊಡನೆ ಜೀವನ ಸಾಗಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಸಮಸ್ಯೆ ಬಗೆಹರಿಸುವುದು ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿ. ಈ ವಿಷಯದ ಬಗ್ಗೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಅಂದಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದರು.
ಪಾಕಿಸ್ತಾನದೊಂದಿಗಿನ ನಮ್ಮ ಸ್ನೇಹ ಮತ್ತು ಸಹಕಾರವನ್ನು ಶಾಂತಿಯುತ ವಾತಾವರಣವಿದ್ದರೇ ಮಾತ್ರ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಭಯೋತ್ಪಾದನೆ ನೆರಳಿನಡಿ ದ್ವಿಪಕ್ಷೀಯ ಮಾತುಕತೆ ನಡೆಸಲು ನಾವು ಸಿದ್ಧರಿಲ್ಲ. ಸೂಕ್ತವಾದ ವಾತಾವರಣ ಸೃಷ್ಟಿಸುವುದು ಪಾಕಿಸ್ತಾನದ ಜವಾಬ್ದಾರಿ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಪಾಕ್ಗೆ ತಿಳಿಸಿದ್ದರು.
2015ರ 70ನೇ ಯುಎನ್ಜಿಎ
ಮೂರು ತಲೆಮಾರಿನ ಕಾಶ್ಮೀರಿಗಳ ಭರವಸೆಗಳು ಕಮರುತ್ತಿದ್ದು, ಕ್ರೂರ ದಬ್ಬಾಳಿಕೆಯನ್ನು ಮಾತ್ರ ಅವರು ನೋಡುತ್ತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇದು ವಿಶ್ವಸಂಸ್ಥೆಯ ದೊಡ್ಡ ವೈಫಲ್ಯ. ನಾನು ಭಾರತದೊಂದಿಗೆ ಹೊಸ (ನಾಲ್ಕು ಅಂಶಗಳ) ಶಾಂತಿಯ ಉಪಕ್ರಮಗಳನ್ನು ಪ್ರಸ್ತಾಪಿಸುತ್ತೇನೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದರು.
ಷರೀಫ್ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಸಚಿವೆ ಆಗಿದ್ದ ದಿ. ಸುಷ್ಮಾ ಸ್ವರಾಜ್ , 'ಈ (ಭಯೋತ್ಪಾದನೆ) ದಾಳಿಗಳ ಮೂಲಕ ಭಾರತವನ್ನು ಅಸ್ಥಿರಗೊಳಿಸುವ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿರುವುದನ್ನು ಕಾನೂನು ಬದ್ಧಗೊಳಿಸಿ ಅವುಗಳನ್ನು ಪಡೆಯುವ ನಿಮ್ಮ ಉದ್ದೇಶ ನಮಗೆಲ್ಲರಿಗೂ ತಿಳಿದಿದೆ. ನಮಗೆ ನಾಲ್ಕು ಅಂಶಗಳ ಅಗತ್ಯವಿಲ್ಲ. ಕೇವಲ ಒಂದನ್ನು ಬಿಡಬೇಕು. ಭಯೋತ್ಪಾದನೆಯನ್ನು ಬಿಟ್ಟುಬಿಡಿ. ನಾವಿಬ್ಬರು ಕುಳಿತು ಮಾತನಾಡೋಣ' ಎಂದು ತಿರುಗೇಟು ನೀಡಿದರು.