ಹೈದರಾಬಾದ್:ಭಾರತದ ರಾಜಕೀಯ ರಂಗದಲ್ಲೇ ಮಾತೃಹೃದಯಿ ಸಚಿವೆ ಎನಿಸಿಕೊಂಡಿರುವ ದಕ್ಷ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ಗೆ ಅಂತಿಮ ಗೌರವ ಸಂದಿದೆ. ಸುಷ್ಮಾ, ಭಾರತ ಕಂಡ ಪ್ರಭಾವಿ ರಾಜಕಾರಣಿ. ಇವರ ರಾಜಕೀಯ ಬದುಕು ಎಲ್ಲರಿಗೂ ತಿಳಿದಿದೆ. ಆದರೆ, ಇವರ ಪ್ರೇಮ್ ಕಹಾನಿ ಹಾಗೂ 44 ವರ್ಷಗಳ ದಾಂಪತ್ಯ ಜೀವನದ ಬಗೆಗೆ ಇಲ್ಲಿದೆ ಮಾಹಿತಿ.
ಸುಷ್ಮಾರದ್ದು ಕಾಲೇಜು ಲವ್ ಸ್ಟೋರಿ. ದೆಹಲಿಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ವೇಳೆ ಸುಷ್ಮಾಗೆ ಸ್ವರಾಜ್ ಕೌಶಲ್ ಮೇಲೆ ಪ್ರೇಮಾಂಕುರವಾಗಿತ್ತು. ಪ್ರೀತಿಯ ಬಗ್ಗೆ ಅದಾಗಲೇ ಸುಷ್ಮಾರ ನಿಲುವು ಬಲವಾಗಿತ್ತು. ಪ್ರೀತಿಗಾಗಿ ಸಕ್ರಿಯ ರಾಜಕೀಯವನ್ನು ತೊರೆದು ವಿವಾಹವಾಗಿ ತಮ್ಮ ಪತಿಯೊಂದಿಗೆ ಹೆಚ್ಚು ಕಾಲ ಕಳೆಯಲು ಬಯಸಿದ್ದರು. ಹೀಗಾಗಿಯೇ ಸುಷ್ಮಾ ಮತ್ತು ಕೌಶಲ್ ನಡುವಣ ಪ್ರೇಮ ಇನ್ನಷ್ಟು ಗಟ್ಟಿಯಾಯ್ತು.
ಪ್ರೇಮಕ್ಕೆ ಅಡ್ಡಿಯಾಗಿಲ್ಲ ರಾಜಕೀಯ ಇವರಿಬ್ಬರದ್ದೂ ವಿಭಿನ್ನ ಸಿದ್ಧಾಂತ...
ಅಂದಹಾಗೇ ಸುಷ್ಮಾ ಮತ್ತು ಕೌಶಲ್ ಪ್ರೇಮ ತುಂಬಾ ವಿಭಿನ್ನ. ಯಾಕಂದ್ರೆ ಸುಷ್ಮಾ ಕಾಲೇಜು ಓದುತ್ತಿದ್ದಾಗಲೇ ಆರ್ಎಸ್ಎಸ್ ಕಡೆಗೆ ಒಲವು ತೋರಿ ತಾನೊಬ್ಬ ಬಲ ಸಿದ್ಧಾಂತವಾದಿ ಎಂಬುದನ್ನು ತೋರಿಸಿಕೊಟ್ಟಿದ್ದರು. ಆದ್ರೆ ಕೌಶಲ್ ರಾಜಕೀಯ ಸಿದ್ಧಾಂತವೇ ಬೇರೆಯಾಗಿತ್ತು. ಪಕ್ಕಾ ಸಮಾಜವಾದಿ ನಂಬಿಕೆಯ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ಕೌಶಲ್, ತಮ್ಮ ಸಿದ್ಧಾಂತವನ್ನು ಮೆಟ್ಟಿ ನಿಂತು ಸುಷ್ಮಾರನ್ನು ಪ್ರೀತಿಸಿ, ವಿವಾಹವಾದರು...
ಸುಪ್ರೀಂ ಕೋರ್ಟ್ನಲ್ಲೂ ಮುಂದುವರಿದ ಕಾಲೇಜು ಪ್ರೀತಿ
ದೆಹಲಿಯ ಕಾನೂನು ಕಾಲೇಜಿನಲ್ಲಿ ಚಿಗುರೊಡೆದಿದ್ದ ಇವರ ಪ್ರೀತಿ, ಸೈದ್ಧಾಂತಿಕ ಮನಸ್ಥಿತಿಯ ಎಲ್ಲೆ ಮೀರಿ ಸುಪ್ರೀಂ ಕೋರ್ಟ್ನಲ್ಲಿ ವಕೀಲ ವೃತ್ತಿಯ ಅಭ್ಯಾಸದ ವೇಳೆಯೂ ಮುಂದುವರಿಯಿತು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ, ಜಾರ್ಜ್ ಫರ್ನಾಂಡಿಸ್ ಅವರ ಪ್ರಕರಣವನ್ನು ನಿಭಾಯಿಸುತ್ತಿದ್ದ ವಕೀಲರ ತಂಡದಲ್ಲಿ ಸುಷ್ಮಾ ಮತ್ತು ಕೌಶಲ್ ಕೆಲಸ ಮಾಡಿದ್ದರು. ಈ ವೇಳೆ ಇವರಿಬ್ಬರ ಪ್ರೇಮ ಮತ್ತಷ್ಟು ಬಲಪಡೆಯಿತು.
ತುರ್ತು ಪರಿಸ್ಥಿಯಲ್ಲೇ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದ ಸುಷ್ಮಾ
ಅದು 1975 ರ ಜುಲೈ 13. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಈ ನಡುವೆಯೇ ಸುಷ್ಮಾ ಹಾಗೂ ಕೌಶಲ್ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರೂ ಹಸೆಮಣೆ ಏರುವುದು ಎರಡೂ ಕುಟುಂಬಗಳಿಗೂ ಇಷ್ಟವಿರಲಿಲ್ಲ. ಎರಡೂ ಕಡೆಯಿಂದಲೂ ಈ ಜೋಡಿಗೆ ವಿರೋಧವಿತ್ತು. ಸುಷ್ಮಾ, ಹರಿಯಾಣದ ಸಾಂಪ್ರದಾಯಿಕ ಕುಟುಂಬದಿಂದ ಬಂದವರು. ಹೀಗಾಗಿ ಕುಟುಂಬದ ವಿರೋಧ ವ್ಯಕ್ತವಾಗಿತ್ತು. ಇನ್ನೊಂದೆಡೆ ಸುಷ್ಮಾ ತಮ್ಮ ಗಂಡನ ಉಪನಾಮವನ್ನೇ ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡು ತಮ್ಮ ಪ್ರೀತಿ ಗಟ್ಟಿಯಾಗಿದೆ ಎಂದು ಅದಾಗಲೇ ತೋರಿಸಿಕೊಟ್ಟಿದ್ದರು.
ಇವರಿಬ್ಬರ ಪ್ರೀತಿಯ ಪ್ರತೀಕವೇ, ಅವರ ಏಕೈಕ ಮಗಳು ಬನ್ಸೂರಿ ಸ್ವರಾಜ್. ಬನ್ಸೂರಿ ಕೂಡಾ ಮುಂದೆ ಕಾನೂನು ವ್ಯಾಸಂಗ ಮಾಡಿದರು.
ಮೊನ್ನೆ, ಅಂದರೆ ಆಗಸ್ಟ್ 6ರಂದು ಸುಷ್ಮಾ ಇಹಲೋಕ ತ್ಯಜಿಸಿದ ಕೆಲ ದಿನಗಳ ಹಿಂದೆಯಷ್ಟೇ ಸುಷ್ಮಾ ಮತ್ತು ಕೌಶಲ್ 44 ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಸುಷ್ಮಾ ಪತಿ, ಮಗಳು ಹಾಗೂ ತಮ್ಮ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಏನೇ ಇರಲಿ ಪ್ರೀತಿ ಹಾಗೂ ರಾಜಕೀಯದ ಬಗ್ಗೆ ಇವರಿಗಿದ್ದ ಗೌರವ ಹಾಗೂ ಅಭಿಮಾನ ಮೆಂಚುವಂತದ್ದೇ...