ನವದೆಹಲಿ:ಮುಂದಿನ ಐದು ದಿನಗಳಲ್ಲಿ ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಮುನ್ಸೂಚನೆ ನೀಡಿದೆ.
ಉತ್ತರ ತಮಿಳುನಾಡು, ಆಂಧ್ರಪ್ರದೇಶದ ಕರಾವಳಿ ಭಾಗ ಸೇರಿದಂತೆ ನೆರೆಹೊರೆಯಲ್ಲಿ ಕಡಿಮೆ ಮತ್ತು ಮಧ್ಯ-ಉಷ್ಣವಲಯದ ಭಾಗದಲ್ಲಿ ತೀವ್ರ ಮಟ್ಟದ ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ ಐದು ದಿನಗಳಲ್ಲಿ ಕೇರಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಚದುರಿದ ಮಳೆಯಾಗಲಿದೆ ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದೂ ತಿಳಿಸಿರುವ ಹವಾಮಾನ ಇಲಾಖೆ, ಅಕ್ಟೋಬರ್ 30, ನವೆಂಬರ್ 1 ಮತ್ತು ನವೆಂಬರ್ 2 ರಂದು ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ಮುನ್ಸೂಚನೆ ನೀಡಿದೆ.
ನವೆಂಬರ್ 1 ರಂದು ಕೇರಳ ಮತ್ತು ಮಾಹೆಯಲ್ಲಿ ಹಾಗೇ ನವೆಂಬರ್ 1 ಮತ್ತು 2 ರಂದು ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿಯೂ ಭಾರಿ ಮಳೆಯಾಗಲಿದೆ ಎಂದಿದೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದಿಂದ ಚೆನ್ನೈನಲ್ಲಿ ಇಂದು ಬೆಳಗ್ಗೆ ಗುಡುಗು, ಸಿಡಿಲಿನ ಸಹಿತ ಭಾರೀ ಮಳೆಯಾಗಿದೆ. ಇನ್ನು ಇಲ್ಲಿನ ಅನೇಕ ಭಾಗಗಳಲ್ಲಿ ಕಡುಕಪ್ಪಾದ ಮೋಡದ ವಾತಾವರಣ ಇದ್ದು ಮುಂದಿನ ಐದು ದಿನಗಳವರೆಗೆ ಇದೇ ರೀತಿ ಮಳೆ ಅಬ್ಬರ ಮುಂದುವರಿಯಲಿದೆ ಎನ್ನಲಾಗುತ್ತಿದೆ.