ನವದೆಹಲಿ: ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಇಂದಿನಿಂದ ದೆಹಲಿ ಸರ್ಕಾರ ಸಮ - ಬೆಸ ಸಂಖ್ಯೆ ನಿಯಮ ಮತ್ತೆ ಜಾರಿಗೆ ತಂದಿದೆ.
ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಭಾನುವಾರ ಮಳೆ ಸುರಿದ ಬಳಿಕ ಮಾಲಿನ್ಯದ ಮಟ್ಟ ಅಧಿಕಗೊಂಡಿದೆ. ದಟ್ಟ ಹೊಗೆ ಮತ್ತು ಮಂಜಾದ ಗೋಚರತೆಯಿಂದ ಸಂಚಾರ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಏರ್ ಕ್ವಾಲಿಟಿ ಅಂಡ್ ವೆದರ್ ಪೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಎಸ್‍ಎಎಫ್‍ಆರ್) ಸೆಂಟರ್ ಪ್ರಕಾರ ಉಸಿರಾಟಕ್ಕೆ ಅತೀವವಾದ ಅಪಾಯವಿದೆ. ವಿಪರೀತ ವಾಯುಮಾಲಿನ್ಯದಿಂದಾಗಿ ನಿನ್ನೆಯಿಂದಲೇ ದಟ್ಟವಾದ ಹೊಗೆ ಆವರಿಸಿಕೊಂಡಿದೆ.
ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಸಮ - ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ತಂದಿದೆ. ನವೆಂಬರ್ 5 ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಇದು ಮೂರನೇ ಬಾರಿ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಜಾರಿಗೊಳಿಸಲಾಗಿದೆ. ಇಂದಿನಿಂದ ನವೆಂಬರ್ 15 ರವರೆಗೂ ಈ ಸಮ - ಬೆಸ ವಾಹನ ಸಂಚಾರ ನಿಯಮ ಜಾರಿಯಲ್ಲಿರಲಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ 4000 ರೂ. ದಂಡ ವಿಧಿಸಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.