ಕೋವಿಡ್ 19 ವೈರಸ್ ತಡೆಯಲು ಈವರೆಗೆ ಅತ್ಯಂತ ಪರಿಣಾಮಕಾರಿ ಔಷಧ ಎಂದು ಪರಿಗಣಿಸಲಾದ ರೆಮ್ಡೆಸಿವಿರ್ ಅನ್ನು ತುರ್ತು ಬಳಕೆಗೆ ಅನುಮೋದನೆ ನೀಡುತ್ತಿದ್ದಂತೆಯೇ, ಕೆಮಿಸ್ಟ್ಗಳು ಮತ್ತು ಡೀಲರ್ಗಳು ಹಣದ ದಾಹಕ್ಕೆ ಬಿದ್ದಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ. ದೆಹಲಿಯ ಇಬ್ಬರು ಅಧಿಕೃತ ಮಾರಾಟಗಾರರ ಬಳಿ ರೆಮ್ಡೆಸಿವಿರ್ ಇಲ್ಲದ್ದರಿಂದ ಎರಡು ಡೋಸ್ ಅನ್ನು ಖರೀದಿಸಿ ತರುವಂತೆ ನಮಗೆ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದರು. ಆದರೆ, ಈ ಔಷಧ ಕಾಳಸಂತೆಯಲ್ಲಿ ಲಭ್ಯವಿದೆಯಾದರೂ, ಬೆಲೆ ಗಗನಕ್ಕೇರಿದೆ ಎಂದು ಹೆಸರು ಹೇಳಲಿಚ್ಛಿಸದ ಕೋವಿಡ್ ರೋಗಿಯ ಸಂಬಂಧಿಯೊಬ್ಬರು ಈಟಿವಿ ಭಾರತ್ಗೆ ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಕೋವಿಡ್ ಕೇರ್ ಸೆಂಟರ್ ಎಂಬುದಾಗಿ ನಿಯೋಜಿಸಿದ ದೆಹಲಿಯ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಕೋವಿಡ್ ಸೋಂಕಿತ ಸಂಬಂಧಿಯೊಬ್ಬರಿಗೆ ಚಿಕಿತ್ಸೆಗೆ ದಾಖಲಿಸಿದ್ದ ದೆಹಲಿ ಮೂಲದ ಉದ್ಯಮಿಯ ಆಘಾತಕಾರಿ ಅನುಭವವು, ಕೋವಿಡ್ಗೆ ಜನಸಾಮಾನ್ಯರು ಚಿಕಿತ್ಸೆ ಪಡೆಯಲು ಪರದಾಡುತ್ತಿರುವುದನ್ನು ಅನಾವರಣಗೊಳಿಸಿದೆ. ಅಷ್ಟೇ ಅಲ್ಲ, ಇದು ಅಧಿಕಾರಿಗಳ ಕಣ್ಣು ತೆರೆಸುವಂತಿದೆ.
ಈ ಸೋಂಕು ಭಾರತದಾದ್ಯಂತ 26,000ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ ಮತ್ತು 11.48 ಲಕ್ಷ ಜನರಿಗೆ ಸೋಂಕು ತಗುಲಿದೆ. ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ 5,47,000 ಕ್ಕೂ ಹೆಚ್ಚು ಸಾವು ಸಂಭವಿಸಿದೆ ಮತ್ತು 12 ಮಿಲಿಯನ್ ಜನರಿಗೆ ಸೋಂಕು ತಗುಲಿದೆ.
ಕೋವಿಡ್ 19 ಸೋಂಕಿನ ಚಿಕಿತ್ಸೆಯಲ್ಲಿ ತುರ್ತು ಸ್ಥಿತಿಗಾಗಿ ಬಳಕೆ ಮಾಡುವುದಕ್ಕಾಗಿ ಕೆಲವು ಔಷಧಗಳನ್ನು ಕಳೆದ ತಿಂಗಳು ಕೇಂದ್ರ ಸರ್ಕಾರ ಅನುಮೋದಿಸಿದೆ. ಗಿಲೀಡ್ ಸೈನ್ಸಸ್ನಿಂದ ರೆಮ್ಡೆಸಿವಿರ್ ಅನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಸಿಪ್ಲಾ, ಹೀಟೆರೊ ಮತ್ತು ಮೈಲಾನ್ ಅನುಮತಿ ಪಡೆದಿದೆ. ಫಾಬಿಫ್ಲು ಬ್ರಾಂಡ್ ನೇಮ್ ಹೆಸರಿನಲ್ಲಿ ಫಾವಿಪಿರಾವಿರ್ ಅನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಗ್ಲೆನ್ಮಾರ್ಕ್ ಅನುಮತಿ ಪಡೆದಿದೆ.
ಕೋವಿಡ್ 19 ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಎಂದು ರೆಮ್ಡೆಸಿವಿರ್ ಅನ್ನು ಪರಿಗಣಿಸಲಾಗಿದ್ದು, ಇದಕ್ಕೆ ದೇಶದಲ್ಲಿ ಅನುಮತಿ ನೀಡಿರುವುದು ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ನಿರಾಳವಾಗಿದೆ. ಆದರೆ, ಇದಕ್ಕೆ ಅನುಮತಿ ನೀಡಿರುವುದು ಹಣ ದಾಹಕ್ಕೆ ಬಿದ್ದವರಿಗೆ ಒಳ್ಳೆಯ ಅವಕಾಶ ನೀಡಿದಂತಾಗಿದೆ.
“ತಿಂಗಳ ಆರಂಭದಲ್ಲಿ, ನಮ್ಮ ರೋಗಿ ಅಡ್ಮಿಟ್ ಆಗಿರುವ ಆಸ್ಪತ್ರೆಯ ವೈದ್ಯರು ನಮಗೆ ಕರೆ ಮಾಡಿ, ರೋಗಿಗೆ ರೆಮ್ಡೆಸಿವಿರ್ ಅನ್ನು ನೀಡಬೇಕಿದೆ ಎಂದರು. ಅಷ್ಟಕ್ಕೂ, ಅವರು ಹೇಳಿದ ಪ್ರಕಾರ ಈಗಾಗಲೇ ರೋಗಿಗೆ ಈ ಔಷಧ ನೀಡಲಾಗಿದೆ. ಆದರೆ ಔಷಧ ಪೂರೈಕೆ ಇಲ್ಲದ್ದರಿಂದ ಈಗ ಅವರಿಗೆ ಎರಡು ಡೋಸ್ ಔಷಧ ಬೇಕಾಗಿದೆ. ಅದರ ವ್ಯವಸ್ಥೆ ಮಾಡಿಕೊಡಿ ಎಂದು ಅವರು ನಮಗೆ ಹೇಳಿದರು” ಎಂದು ಈಟಿವಿ ಭಾರತ್ಗೆ ರೋಗಿಯ ಸಂಬಂಧಿ ಹೇಳಿದ್ದಾರೆ.
ಆಸ್ಪತ್ರೆಯಿಂದ ಕರೆ ಬಂದ ನಂತರ, ಔಷಧವನ್ನು ಹುಡುಕಲು ಅವರು ಆರಂಭಿಸಿದೆವು. ದೆಹಲಿಯಲ್ಲಿರುವ ಎರಡು ಅಧಿಕೃತ ಡೀಲರ್ಗಳನ್ನು ಸಂಪರ್ಕಿಸಿದೆವು. ರೋಗಿಯ ಆಧಾರ್ ಕಾರ್ಡ್, ವೈದ್ಯರ ಶಿಫಾರಸು ಮತ್ತು ಕೋವಿಡ್ ಪಾಸಿಟಿವ್ ವರದಿಯನ್ನು ಸಲ್ಲಿಸಬೇಕು. ಅಗ, ಪ್ರತಿ ಸೀಸೆಗೆ ರೂ. 4,500 ದರದಲ್ಲಿ ರೆಮ್ಡೆಸಿವಿರ್ ಔಷಧ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
“ದುರಾದೃಷ್ಟವಶಾತ್, ಎರಡೂ ಕಡೆಯಲ್ಲಿ ಔಷಧ ಸಂಗ್ರಹ ಇರಲಿಲ್ಲ” ಎಂದು ಸಂಬಂಧಿಗೆ ಔಷಧವನ್ನು ಖರೀದಿಸುವುದಕ್ಕಾಗಿ ಪಟ್ಟ ಪಡಿಪಾಟಲನ್ನು ಅವರು ವಿವರಿಸಿದ್ದಾರೆ.
ಇದು ಜೀವನ್ಮರಣದ ಪ್ರಶ್ನೆ. ಹೀಗಾಗಿ ನಾವು ಹುಡುಕಾಟ ಮುಂದುವರಿಸಿದೆವು ಮತ್ತು ಇತರ ಔಷಧ ಮಾರಾಟಗಾರರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಡುವಂತೆ ವಿನಂತಿಸಿದೆವು. ಈ ಬಗ್ಗೆ ಹಲವೆಡೆ ಮಾಹಿತಿ ಹರಡಿದ ನಂತರ ಕೆಲವರು, ಕಾಳಸಂತೆಯಲ್ಲಿ ಇದು ಮಾರಾಟವಾಗುತ್ತಿದೆ” ಎಂದು ನಮಗೆ ಹೇಳಿದರು.
ಒಂದು ಸೀಸೆಗೆ ರೂ. 15,000 ಬೆಲೆ ಇದೆ ಎಂದು ನಮಗೆ ಯಾರೋ ಹೇಳಿದರು. ಆದರೆ ನಾವು ಖರೀದಿ ಮಾಡುವ ದಿನ ಹೋಗಿ ಕೇಳಿದರೆ ಒಂದು ಸೀಸೆಗೆ ರೂ. 35,000 ಎಂದು ಹೇಳಿದರು. ಅದಕ್ಕೂ ಮೊದಲ ದಿನ ಇದರ ಬೆಲೆ 27 ಸಾವಿರ ರೂ. ಆಗಿತ್ತು. ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಔಷಧದ ಬೆಲೆ ಚಿನ್ನದ ದರದ ರೀತಿ ಏರಿಕೆಯಾಗುತ್ತಿದೆ” ಎಂದು ಈಟಿವಿ ಭಾರತ್ಗೆ ರೋಗಿಯ ಸಂಬಂಧಿ ಹೇಳಿದ್ದಾರೆ.
ರೋಗಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆಯ ಹೆಸರು ಹೇಳಲು ಸಂಬಂಧಿ ನಿರಾಕರಿಸಿದ್ದು, ತನ್ನ ಗುರುತನ್ನು ಬಹಿರಂಗಗೊಳಿಸದೆಯೇ ವಿವರವನ್ನು ಹಂಚಿಕೊಳ್ಳುವ ಅವಕಾಶ ಲೋಕಲ್ ಸರ್ಕಲ್ ಎಂಬ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ನಲ್ಲಿ ಇರುವುದರಿಂದ ಅಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ವಿಶೇಷವಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಜೀವ ರಕ್ಷಕ ಔಷಧದ ಕಳ್ಳ ವ್ಯಾಪಾರ ನಡೆಯುತ್ತಿರುವುದರಿಂದ ಈ ಬಗ್ಗೆ ಜನರ ಗಮನ ಸೆಳೆಯಲು ತಾನು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.