ಧೋಲ್ಪುರ್ (ರಾಜಸ್ಥಾನ): ಭಾರೀ ಮಳೆಯಿಂದ ಚಂಬಲ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಿಂದ್-ದೋಲ್ಪುರ್ ಗಡಿಯಲ್ಲಿ 6 ಜನ ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ಚಂಬಲ್ ನದಿ ಪ್ರವಾಹಕ್ಕೆ ಕೋಟ ನಗರ ಜಲಾವೃತ ರಾಜ್ಖೇಡ ಪ್ರದೇಶದಲ್ಲಿ ರೈಲ್ವೆ ಕಾಮಗಾರಿಯಲ್ಲಿ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಚಂಬಲ್ ನದಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ 6 ಜನ ಕಾರ್ಮಿಕರು ಕೊಚ್ಚಿಹೋಗಿದ್ದಾರೆ. ಇದನ್ನ ಕಂಡ ಸ್ಥಳಿಯರು ಹರಸಾಹಸ ಪಟ್ಟು ಕಾರ್ಮಿಕರನ್ನು ರಕ್ಷಸಿದ್ದಾರೆ.
ಎಡೆಬಿಡದ ಸುರಿಯುತ್ತಿರುವ ಮಳೆಯಿಂದ ಕೋಟ ಜಲಾಶಯದಿಂದ 18 ಗೇಟ್ಗಳ ಮೂಲಕ 5 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದ ನಗರದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ನದಿಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸರ್ಕಾರ ಸೂಚಸಿದೆ.
ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಎನ್ಡಿಆರ್ಎಫ್ ತಂಡ ಪ್ರವಾಹದಲ್ಲಿ ಸಿಲುಕಿದ್ದವರನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಪಕ್ಕದ ಮಧ್ಯಪ್ರದೇಶದಲ್ಲೂ ಭಾರಿ ಮಳೆ ಆಗುತ್ತಿರುವುದರಿಂದ ರಾಜಸ್ಥಾನದ ಹಲವೆಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಿತ್ತೋರ್‌ಗಢದಲ್ಲಿ ಶನಿವಾರದಿಂದ ಶಾಲೆಯಲ್ಲೇ ಉಳಿದ ಮಕ್ಕಳು:
ಸುಮಾರು 350 ಕ್ಕೂ ಮಕ್ಕಳು ಹಾಗು 50 ಮಂದಿ ಶಿಕ್ಷಕರು ಚಿತ್ತೋರಗಢದ ಶಾಲೆಯಲ್ಲಿ ಶನಿವಾರದಿಂದ ಸಿಲುಕಿಕೊಂಡಿದ್ದಾರೆ. ರಾಣಾ ಪ್ರತಾಪ್ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟ ಕಾರಣ ಇಲ್ಲಿನ ರಸ್ತೆಗಳೆಲ್ಲಾ ಜಲಾವೃತವಾಗಿವೆ. ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸ್ಥಳೀಯರು ಆಹಾರ ಮತ್ತು ಇನ್ನಿತರ ದಿನಬಳಕೆ ವಸ್ತುಗಳನ್ನು ಪೂರೈಸಿದ್ದಾರೆ.