ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಪ್ರದೇಶದ ಜಮಾತ್ ಮಸೀದಿಯಲ್ಲಿ ಮಾರ್ಚ್ 10ರಂದು ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿರೋದು ಗೊತ್ತಾಗಿದೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿಯು ಇವರಲ್ಲೊಬ್ಬರಾಗಿದ್ದರು ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ರಾಜ್ಯದ 45 ಮಂದಿ ಭಾಗಿ: ಶಿರಾದಲ್ಲಿ ಮೃತಪಟ್ಟ ವ್ಯಕ್ತಿ ಇವರಲ್ಲೊಬ್ಬ! - coronA
ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ಕರ್ನಾಟಕದವರೂ ಭಾಗಿಯಾಗಿದ್ದು ಅವರ ಮೇಲೆ ನಿಗಾ ಇಡಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಜೊತೆಗೆ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿ ಕೂಡಾ ಇಲ್ಲಿ ಭಾಗಿಯಾಗಿದ್ದರು ಎಂದು ಸಚಿವರು ತಿಳಿಸಿದ್ದಾರೆ.

ಹೀಗಾಗಿ ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇವರನ್ನು ಪತ್ತೆ ಮಾಡಿ, ಕ್ವಾರಂಟೈನ್ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಇವರಲ್ಲಿ ಈಗಾಗಲೇ 13 ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ಆಸ್ಟ್ರೇಲಿಯಾ, ಸಿಂಗಪೂರ್, ದುಬೈ, ಸೌದಿ ಅರೇಬಿಯಾ, ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಉಳಿದ ವ್ಯಕ್ತಿಗಳನ್ನು ಆದಷ್ಟು ಬೇಗ ಗುರುತಿಸಿ ಎಲ್ಲರನ್ನೂ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.