ನವದೆಹಲಿ: ದಿಢೀರ್ ಬೆಳವಣಿಗೆಯೊಂದರಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಯು ಕೋವಿಡ್-19 ಸಂಬಂಧಿತ ಆರೋಗ್ಯ ರಕ್ಷಣಾ ಕಾರ್ಯಕರ್ತರಿಗೆ ಮಹತ್ವದ ಆದೇಶ ಹೊರಡಿಸಿದೆ.
ಕೋವಿಡ್- 19 ವೈರಸ್ ಹೆಚ್ಚಿನ ಅಪಾಯವನ್ನು ಉಂಟುಮಾಡುವ ಆರೋಗ್ಯ ರಕ್ಷಣಾ ಕಾರ್ಯಕರ್ತರು ಒಂದು ವಾರ ಕ್ವಾರಂಟೈನ್ ಹೋಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರು ಪತ್ರ ಬರೆದಿದ್ದು, ಕೋವಿಡ್ ಕರ್ತವ್ಯ ನಿರ್ವಹಿಸುವವರಿಗೆ ವೈರಸ್ ಹೆಚ್ಚುವ ಸಂಭವವಿದೆ. ಒಂದು ವಾರ ಮಾತ್ರ ಕ್ಯಾರಂಟೈನ್ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಆ ಬಳಿಕ ಆರೋಗ್ಯ ಕಾರ್ಯಕರ್ತರ ಪ್ರೊಫೈಲ್ ಪರಿಶೀಲಿಸಿ ಅಗತ್ಯ ಇದ್ದವರಿಗೆ ಇನ್ನೂ ಒಂದು ವಾರದವರೆಗೆ ಸಾಂಸ್ಥಿಕ ಕ್ವಾರಂಟೈನ್ ವಿಸ್ತರಿಸಬಹುದು. ರೋಗ ಹರಡುವುದನ್ನು ತಡೆಯಲು ಈ ಕ್ವಾರಂಟೈನ್ ಸಾರ್ವಜನಿಕ ಹಿತದೃಷ್ಟಿಯಿಂದ ಸೂಚಿಸಲಾಗಿದೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಕ್ವಾರಂಟೈನ್ ಅವಧಿಯಲ್ಲಿ ಕರ್ತವ್ಯನಿರತವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಯುನೈಟೆಡ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಯುಆರ್ಡಿಎ) ಸಲ್ಲಿಸಿದ ಅರ್ಜಿಯ ನಂತರ ಸುಪ್ರೀಂಕೋರ್ಟ್ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ.
ಈ ಬಗ್ಗೆ ಸಚಿವಾಲಯವು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಂಡಿದೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಕ್ವಾರಂಟೈನ್ ಅನ್ನು ಕರ್ತವ್ಯದಲ್ಲಿದ್ದಂತೆ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಅಗರ್ವಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಂದಾಜಿನ ಪ್ರಕಾರ ಕೋವಿಡ್- 19ರ ಕಾರಣದಿಂದಾಗಿ 196 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.