ಬೆಂಗಳೂರು:ಇಂದು ಆದಾಯ ತೆರಿಗೆ ಇಲಾಖೆ ಜೆಡಿಎಸ್ ಸಚಿವರು, ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಗರಂ ಆಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಹೆಚ್ ಡಿ ದೇವೇಗೌಡ, 2018 ಚುನಾವಣೆ ಮೊದಲು ಹಾಗೂ ಚುನಾವಣೆ ನಂತರ ಬಿಜೆಪಿ ಜತೆ ಕೈ ಜೋಡಿಸುವಂತೆ ಕೋರಿ ಭಾರಿ ಮೊತ್ತದ ಹಣದ ಆಮಿಷವನ್ನ ಕೇಸರಿ ಪಡೆ ನಾಯಕರು ಒಡ್ಡಿದ್ದರು ಎಂಬ ಆರೋಪ ಮಾಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ಪಕ್ಷದ ಎಲ್ಲ ಚುನಾವಣೆ ಖರ್ಚನ್ನು ತಾವೇ ಭರಿಸುವುದಾಗಿ ಆಮಿಷ ಒಡ್ಡಿದ್ದರು. ಆದರೆ ನಾವು ಯಾವುದೇ ಆಮಿಷಗಳಿಗೆ ಜಗ್ಗಲಿಲ್ಲ. ಈ ಸಂಬಂಧ ಕುಮಾರಸ್ವಾಮಿ ಮೂಲಕ ತಮ್ಮ ಮೇಲೆ ಒತ್ತಡ ಹಾಕುವ ಕೆಲಸವನ್ನ ಮಾಡಿದ್ದರು ಎಂಬ ಸ್ಫೋಟಕ ಮಾಹಿತಿಗಳನ್ನ ಹೊರಹಾಕಿದ್ದಾರೆ. ನವದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಲು ಅಮಿತ್ ಶಾ ಇಚ್ಛೆ ವ್ಯಕ್ತಪಡಿಸಿದ್ದರು ಆದರೆ ತಾವು ಅವರ ಆಹ್ವಾನವನ್ನು ನಿರಾಕರಿಸಿದ್ದೆ. ಇದೆಲ್ಲದರ ಪರಿಣಾಮ ಇಂದು ಐಟಿ ದಾಳಿ ನಡೆದಿದೆ ಎಂದು ಮಾಜಿ ಪ್ರಧಾನಿ ಬಾಂಬ್ ಸಿಡಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧವೂ ಗುಡುಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಂಸತ್ತಿನಲ್ಲೂ ಹಾಗೂ ಹೊರಗಡೆಯೂ ಮೋದಿ ಪ್ರತಿಪಕ್ಷದ ನಾಯಕರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ಬಳಸುತ್ತಿರುವ ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.