ಜೈಪುರ (ರಾಜಸ್ಥಾನ):ಸಚಿನ್ ಪೈಲಟ್ ಹಾಗೂ 18 ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ ಜೈಪುರ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಇಂದು ತೀರ್ಪು ಹೊರ ಬೀಳಲಿದೆ.
ಕಾಂಗ್ರೆಸ್ ಶಾಸಕರು ಪಕ್ಷದ ವಿರುದ್ಧ ಬಂಡಾಯ ಹೂಡಿದ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನ ವಿಧಾನಸಭಾ ಸ್ಪೀಕರ್ ಅಷ್ಟೂ ಮಂದಿ ಶಾಸಕರ ಸ್ಥಾನಕ್ಕೆ ಅನರ್ಹರು ಎಂದು ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ನೇತೃತ್ವದಲ್ಲಿ 18 ಮಂದಿ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿದ್ದರು. ಶುಕ್ರವಾರದಿಂದ ಸೋಮವಾರದವರೆಗೆ ಅರ್ಜಿಯ ವಿಚಾರಣೆ ಕೂಡಾ ನಡೆದಿತ್ತು.
ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಇಂದ್ರಜಿತ್ ಮೊಹಾಂತಿ ಹಾಗೂ ಜಸ್ಟೀಸ್ ಪ್ರಕಾಶ್ ಗುಪ್ತ ಅರ್ಜಿಯ ವಿಚಾರಣೆ ನಡೆಸಿದ್ದರು. ಇಂದು ಕೂಡಾ ವಿಚಾರಣೆ ನಡೆಯುತ್ತಿದ್ದು, ತೀರ್ಪು ಬರುವ ಸಾಧ್ಯತೆಯಿದೆ.
ಇದರ ಜೊತೆಗೆ ಕಾಂಗ್ರೆಸ್ ಶಾಸಕಾಂಗ ಸಭೆ 11 ಗಂಟೆಗೆ ನಡೆಯಲಿದ್ದು, ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ. ಬಂಡಾಯ ಹೂಡಿರುವ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಯತ್ನಿಸಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.