ರಾಮನಾಥಪುರಂ(ತಮಿಳುನಾಡು):ಲಡಾಕ್‌ನ ಗಾಲ್ವನ್‌ನಲ್ಲಿ ಚೀನಾ ಯೊಧರ ಜೊತೆಗಿನ ಘರ್ಷಣೆಯಲ್ಲಿ ಹುತಾತ್ಮನಾಗಿದ್ದ ಯೋಧ ಪಳನಿ ಅವರ ಅಂತ್ಯಸಂಸ್ಕಾರ ಹುಟ್ಟೂರು ಕಡಕ್ಕಲೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಪೊಲೀಸರು ಕುಶಾಲು ತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಕುಟುಂಬ ಸದಸ್ಯರು ಹಾಗೂ ನೆರೆಹೊರೆಯ ನೂರಾರು ಮಂದಿ ಪಾಲ್ಗೊಂಡಿದ್ದರು.
ಯೋಧನ ಪಾರ್ಥೀವ ಶರೀರದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಯೋಧನ ಕುಟುಂಬಕ್ಕೆ ಸೇನಾ ಸಿಬ್ಬಂದಿ ಹಸ್ತಾಂತರಿಸಿದರು. ಈ ವೇಳೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.
ಇದಕ್ಕೂ ಮುನ್ನ ಸೇನಾಧಿಕಾರಿಗಳು, ಜಿಲ್ಲಾಧಿಕಾರಿ ವೀರ ರಾಘವ ರಾವ್, ಪೊಲೀಸ್ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಬುಧವಾರ ತಡರಾತ್ರಿ ಮಧುರೈನ ವಿಮಾನ ನಿಲ್ದಾಣಕ್ಕೆ ಪಳನಿ ಅವರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ಇಲ್ಲಿಯೂ ಸೇನಾ ಗೌರವಗಳನ್ನು ಸಲ್ಲಿಸಲಾಗಿತ್ತು. ಇಂದು ಬೆಳಗ್ಗೆಯಷ್ಟೇ ಸ್ವಗ್ರಾಮಕ್ಕೆ ಮೃತದೇಹವನ್ನು ತಂದು ಮಧ್ಯಾಹ್ನದ ವೇಳೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ವೀರ ರಾಘವ ರಾವ್, ಸರ್ಕಾರ ಘೋಷಿಸಿದ್ದ 20 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಕುಟುಂಬಸ್ಥರಿಗೆ ನೀಡಿದರು.
ಕಳೆದ ಸೋಮವಾರ ರಾತ್ರಿ ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ ಸೇನೆಗಳ ಘರ್ಷಣೆಯಲ್ಲಿ ಹುತಾತ್ಮರಾಗಿದ್ದ 20 ಯೋಧರ ಪೈಕಿ ತಮಿಳುನಾಡಿನ ಪಳನಿ ಕೂಡ ಒಬ್ಬರು.