ಕಾನ್ಪುರ (ಉತ್ತರ ಪ್ರದೇಶ):ಬಿಕ್ರು ಗ್ರಾಮದಲ್ಲಿ ಜುಲೈ 3ರಂದು ಕುಖ್ಯಾತ ರೌಡಿ ವಿಕಾಸ್ ದುಬೆ ಎಂಬಾತನನ್ನು ಬಂಧಿಸಲು ಹೋದ ಸಂದರ್ಭದಲ್ಲಿ ನಡೆದ ಹೊಂಚುದಾಳಿಯಲ್ಲಿ ಎಂಟು ಪೊಲೀಸರ ಹತ್ಯೆ ಮತ್ತು ಏಳು ಸಿಬ್ಬಂದಿ ಗಾಯಗೊಂಡ ನಂತರ ದುಷ್ಟಶಕ್ತಿಗಳನ್ನು ನಿವಾರಿಸುವ ಸಲುವಾಗಿ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಚೌಬೆಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹೋಮ-ಹವನ ನಡೆಸಿದರು.
ಬಿಕ್ರು ಗ್ರಾಮದಲ್ಲಿ ನಡೆದ ಪೊಲೀಸರ ಹತ್ಯಾಕಾಂಡದ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದೇವೆ. ಆದರೆ, ಘಟನೆ ನಂತರ ಕರ್ತವ್ಯದ ಸಮಯದಲ್ಲಿ ಅನೇಕ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಆತಂಕ ದೂರ ಮಾಡಲು ಸಲಹೆ ನೀಡಿ ಎಂದು ಪಾದ್ರಿಯೊಬ್ಬರೊಂದಿಗೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.
ದುಷ್ಟಶಕ್ತಿಗಳಿಂದ ಮುಕ್ತವಾಗಲು ನಿಯಮಿತವಾಗಿ ಪೂಜೆ ನಡೆಸುವಂತೆ ಆ ಸ್ಥಳೀಯ ಪಾದ್ರಿ ಸಲಹೆ ಕೊಟ್ಟಿದ್ದರು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಕೆಲವು ಸ್ಥಳೀಯ ಗ್ರಾಮಸ್ಥರಲ್ಲದೆ ಬಹುತೇಕ ಸಿಬ್ಬಂದಿ ಹವನದಲ್ಲಿ ಭಾಗವಹಿಸಿದ್ದರು. ಪುರೋಹಿತರೊಬ್ಬರು ಪೂಜೆ ನಡೆಸಿ ಮಂತ್ರಗಳನ್ನು ಪಠಿಸಿದರು. ಘಟನೆ ನಂತರ ಠಾಣೆಯಲ್ಲಿ ನಿಯೋಜಿಸಲಾದ ಎಲ್ಲಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಆದರೆ, ಠಾಣೆಗೆ ಬಂದ ಜನರ ದೂರುಗಳಿಗೆ ಪೊಲೀಸರು ಸ್ಪಂದಿಸದೆ ಹೋಮ-ಹವನದಲ್ಲೇ ಮಗ್ನರಾಗಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಠಾಣೆಯ ಉಸ್ತುವಾರಿ ಡಿ.ಚೌಧರಿ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಠಾಣೆಯ ಶುದ್ಧತೆಗಾಗಿ ಹೋಮ ನಡೆಸಲಾಯಿತು ಎಂದರು.
ಚೌಬೆಪುರ ಪೊಲೀಸ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ಸರ್ಕಲ್ ಅಧಿಕಾರಿ ದೇವೇಂದ್ರ ಮಿಶ್ರಾ ಸೇರಿದಂತೆ ಎಂಟು ಮಂದಿ ಪೊಲೀಸರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಗುಂಡು ಹಾರಿಸಿದ ದರೋಡೆಕೋರ ವಿಕಾಸ್ ದುಬೆ ಅವರನ್ನು ಬಂಧಿಸಲು ಹೋಗಿದ್ದರು. ಜುಲೈ 10ರಂದು ನಡೆದ ಎನ್ಕೌಂಟರ್ನಲ್ಲಿ ವಿಕಾಸ್ ದುಬೆ ಮತ್ತು ಆತನ ಐವರು ಸಹಚರರನ್ನು ಪೊಲೀಸರು ಎನ್ಕೌಂಟರ್ ಮಾಡಿದರು. ಉಳಿದವರನ್ನು ಬಂಧಿಸಲಾಗಿದೆ.