ಹತ್ರಾಸ್ (ಉತ್ತರ ಪ್ರದೇಶ):ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಯುವತಿಯ ಅಂತ್ಯಸಂಸ್ಕಾರವನ್ನು ಇಂದು ವಿರೋಧದ ನಡುವೆಯೂ ನೆರವೇರಿಸಲಾಗಿದೆ.
ಸಂತ್ರಸ್ತೆಯ ಅಂತ್ಯಸಂಸ್ಕಾರಕ್ಕೆ ಸ್ಥಳೀಯ ಜನರು ಮತ್ತು ಆಕೆಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಆದ್ರೆ ನಾವು ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇವೆ. ಇಲ್ಲಿ ಶಾಂತಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತೆಯ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗಿದೆ. ಈಗಾಗಲೇ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹತ್ರಾಸ್ ಜಂಟಿ ಮ್ಯಾಜಿಸ್ಟ್ರೇಟ್ ಪ್ರೇಮ್ ಪ್ರಕಾಶ್ ಮೀನಾ ಹೇಳಿದ್ದಾರೆ.
ಹತ್ರಾಸ್ ಗ್ಯಾಂಗ್ ರೇಪ್ ಸಂಸ್ರಸ್ತೆ ಅಂತ್ಯಸಂಸ್ಕಾರ ಅಲ್ಲದೆ ಸಂತ್ರಸ್ತೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದರು. ಸಂತ್ರಸ್ತೆಯ ಮೃತದೇಹವನ್ನು ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಿಂದ ಮಧ್ಯರಾತ್ರಿ ನಂತರ ಸ್ವಗ್ರಾಮಕ್ಕೆ ತರಲಾಗಿದೆ.
15 ದಿನಗಳ ಹಿಂದೆ ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿ ಮಂಗಳವಾರ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಸಂತ್ರಸ್ತೆಯನ್ನು ಸೋಮವಾರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜಿನಿಂದ ಸಫ್ತರ್ಜಂಗ್ ಆಸ್ಪತ್ರೆಗೆ ಕರೆತರಲಾಗಿತ್ತು.
ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಹತ್ರಾಸ್ ಜಿಲ್ಲಾಡಳಿತ ಮಂಗಳವಾರ ತಿಳಿಸಿದೆ. ರಾಜ್ಯ ಸರ್ಕಾರವು ಈಗಾಗಲೇ ಕುಟುಂಬಕ್ಕೆ 4.12 ಲಕ್ಷ ರೂ. ಪರಿಹಾರವನ್ನು ನೀಡಿದೆ ಎಂದು ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.