ನವದೆಹಲಿ: ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಉಭಯ ನಾಯಕರ ಮಾತುಕತೆಯಲ್ಲಿ ಪರಸ್ಪರ ಸಹಕಾರ, ಸಂಪರ್ಕ, ವ್ಯಾಪಾರ, ಸಂಸ್ಕೃತಿ, ಇನ್ನಿತರ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯಗಳ ವಕ್ತಾರ ರವೀಶ್ ಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಭಯ ರಾಷ್ಟ್ರದ ಪ್ರಧಾನಿಗಳು ಮೂರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಸಾರಿಗೆ ಸಂಪರ್ಕ, ಸಾಮರ್ಥ್ಯ ವೃದ್ಧಿ, ಸಂಸ್ಕೃತಿಗೆ ಸಂಬಂಧಿಸಿದ ಆರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದರು.
ಪ್ರಸ್ತುತ ಭೇಟಿಯ ಸಂದರ್ಭದಲ್ಲಿ ಗಡಿ ರೇಖೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಜೊತೆಗೆ ತೀಸ್ತಾ ನದಿ ವಿವಾದದ ಬಗ್ಗೆ ನಮ್ಮ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದೇವೆ ಎಂದರು. ಗಡಿಯಾಚೆಗಿನ ಏಳು ನದಿಗಳಿಗೆ ಸಂಬಂಧಿಸಿದಂತೆ ಕಾರ್ಯದರ್ಶಿ ಮಟ್ಟದಲ್ಲಿ ಆರಂಭಿಕ ಸಭೆಯನ್ನು ಶೀಘ್ರದಲ್ಲೇ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಭಾರತವು ಈರುಳ್ಳಿ ರಫ್ತನ್ನು ನಿಷೇಧ ಮಾಡಿರುವುದರಿಂದ ತೊಂದರೆ ಆಗಿದೆ ಎಂಬ ಹಸೀನಾ ಹೇಳಿಕೆಯನ್ನು ಪರಿಗಣಿಸಿದ್ದೇವೆ. ಅಲ್ಲದೆ ಅದನ್ನು ಯಾವ ರೀತಿಯಾಗಿ ಸರಿಪಡಿಸಬಹುದು ಎಂದು ಅವರೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂದು ಸಚಿವಾಲಯ ಹೇಳಿದೆ.