ಅಂಬಾಲಾ (ಹರಿಯಾಣ): ತನ್ನ ಗಂಡನನ್ನ ಕೊಂದು ಎರಡು ವರ್ಷಗಳ ಬಳಿಕ ಮಹಿಳೆ ತಪ್ಪೊಪ್ಪಿಕೊಂಡಿದ್ದು, ತನ್ನನ್ನ ಗಲ್ಲಿಗೇರಿಸುವಂತೆ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರಿಗೆ ಪತ್ರವೊಂದನ್ನು ನೀಡಿದ್ದಾಳೆ.
ಗೃಹ ಸಚಿವರು ಸಾರ್ವಜನಿಕ ಕುಂದು ಕೊರತೆಗಳನ್ನ ಆಲಿಸುವಾಗ ಭೇಟಿ ನೀಡಿದ್ದ ದಿವಂಗತ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ರೋಹ್ಟಾಸ್ ಸಿಂಗ್ ಅವರ ಪತ್ನಿ ಸುನೀಲ್ ಕುಮಾರಿ ಪತ್ರವನ್ನ ಗೃಹ ಸಚಿವರಿಗೆ ನೀಡಿದ್ದಾಳೆ ಎಂದು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಜೋರ್ವಾಲ್ ತಿಳಿಸಿದ್ದಾರೆ.
ಪತ್ರದ ಪ್ರಕಾರ, ಜುಲೈ 15, 2017 ರಂದು, ಮೃತ ಎಎಸ್ಐ ರೋಹ್ಟಾಸ್ ಸಿಂಗ್ ಅತಿಯಾಗಿ ಕುಡಿದು ಮನೆಗೆ ಬಂದು ಪತ್ನಿಯನ್ನ ನಿಂದಿಸಿದ್ದರು. ಈ ವೇಳೆ ಆಕೆ ಬಟ್ಟೆಯಿಂದ ಆತನ ಬಾಯಿ ಮುಚ್ಚಿದ್ದಳು. ನೆಲಕ್ಕೆ ಕುಸಿದು ಬಿದ್ದ ರೋಹ್ಟಾಸ್ ವಾಂತಿ ಮಾಡಿಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ವಾಂತಿ ವೇಳೆ ಆಹಾರ ಕಣಗಳಿಂದ ಉಸಿರುಗಟ್ಟಿ ಆತ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಹಾಗಾಗಿ ಮರಣೋತ್ತರ ಪರೀಕ್ಷೆ ವೇಳೆ ಯಾವುದೇ ಅನುಮಾನ ಮೂಡಿರಲಿಲ್ಲವಂತೆ.
ಪತಿಯ ಸಾವಿಗೆ ಕಾರಣಳಾದ ಪತ್ನಿ ಮಾನಸಿಕವಾಗಿ ನೊಂದು, ಮಾಡಿದ ತಪ್ಪಿಗೆ ಶಿಕ್ಷೆ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದಾಳೆ. ಆಕೆ ನೀಡಿದ ಪತ್ರದ ಆಧಾರದ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.