ಚಂಡೀಗಡ್ :ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಬಾಲಿವುಡ್ ನಟಿ ಕಂಗನಾ ರಾನಾವತ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದ ಗೃಹ ಸಚಿವ ಅನಿಲ್ ವಿಜ್ ಅವರು ನಟಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ನಟಿ ಮನದ ಮಾತನ್ನು ಮುಕ್ತವಾಗಿ ಹೇಳಿದ್ದಾಳೆ. ಈ ಹೇಳಿಕೆಯಿಂದ ಅವರಿಗೆ ಬೆದರಿಕೆಗಳು ಬರಬಹುದು, ಹಾಗಾಗಿ ನಟಿಗೆ ಪೊಲೀಸರು ರಕ್ಷಣೆ ಒದಗಿಸಬೇಕೆಂದು ಕೋರಿದ್ದಾರೆ.
ಮುಂಬೈ ಯಾರೊಬ್ಬರ ಆಸ್ತಿ ಅಲ್ಲ; ಕಂಗನಾ ಬೆಂಬಲಕ್ಕೆ ನಿಂತ ಹರಿಯಾಣ ಗೃಹ ಸಚಿವ - ನಟ ಸುಶಾಂತ್ ಸಿಂಗ್ ಸಾವು
ನಟಿ ಕಂಗನಾ ರಾನಾವತ್ ಅವರ ಬೆಂಬಲಕ್ಕೆ ನಿಂತ ಹರಿಯಾಣ ಸರ್ಕಾರದ ಗೃಹ ಸಚಿವ ಅನಿಲ್ ವಿಜ್, ಮುಂಬೈಗೆ ಯಾರಾದರೂ ಬರಬಹುದು, ಹೋಗಬಹುದು. ನಟಿಯನ್ನು ಮುಂಬೈಗೆ ಬರದಂತೆ ತಡೆಯಬೇಕೆಂದು ಹೇಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಅಲ್ಲದೆ ಆಡಳಿತರೂಢ ಶಿವಸೇನೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅನಿಲ್ ವಿಜ್, ಇದು (ಮುಂಬೈ) ಯಾರೊಬ್ಬರ ಆಸ್ತಿ ಅಲ್ಲ. ಮುಂಬೈ ಭಾರತದ ಒಂದು ಭಾಗ. ದೇಶದಲ್ಲಿರುವ ಪ್ರತಿ ಪ್ರಜೆಯೂ ಇಲ್ಲಿಗೆ (ಮುಂಬೈ) ಬಂದು ಹೋಗಬಹುದು. ನಟಿಯನ್ನು ಮುಂಬೈಗೆ ಬರದಂತೆ ತಡೆಯಬೇಕೆಂದು ಹೇಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಅಲ್ಲದೇ ಸತ್ಯ ಮಾತನಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಕಂಗನಾ, ಡ್ರಗ್ ಮಾಫಿಯಾ ಹಾಗೂ ಇಲ್ಲಿನ ಸಿನಿಮಾ ರಂಗದವರೇ ಸುಶಾಂತ್ನನ್ನು ಕೊಂದಿದ್ದಾರೆ. ಈ ಕುರಿತ ಬಂದ ಎಲ್ಲಾ ದೂರುಗಳನ್ನು ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ನನಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಅಲ್ಲದೆ, ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವಂತೆ ಭಾಸವಾಗುತ್ತಿದೆ ಎಂದಿದ್ದರು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ತೀವ್ರವಾಗಿ ಖಂಡಿಸಿತ್ತು. ಜೊತೆಗೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್, ಸಂಸದ ಸಂಜಯ್ ನಟಿ ವಿರುದ್ಧ ಹೇಳಿಕೆ ನೀಡಿದ್ದರು.