ಹರಿಯಾಣ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ಯನ್ನು ರದ್ದು ಮಾಡಿದ ನಂತರ ರಾಜಕೀಯ ನಾಯಕರ ವಿವಾದಾತ್ಮಕ ಹೇಳಿಕೆಗಳ ಸರಣಿ ಮುಂದುವರಿದಿದೆ.
ಮೊನ್ನೆಯಷ್ಟೇ ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್ ಜಮ್ಮು-ಕಾಶ್ಮೀರದಲ್ಲಿ ರೆಸಾರ್ಟ್ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ರು. ಇದೀಗ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಅವರ ಸರದಿ. ಕಾಶ್ಮೀರದ ಯುವತಿಯರನ್ನು ನಾವು ಈಗ ಕರೆತಂದು ಮದುವೆ ಮಾಡುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಮನೋಹರ್ ಲಾಲ್ ಕಟ್ಟರ್ ನೀಡಿದ್ದಾರೆ.
ಫಾತೇಬಾದ್‌ನಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಚಿವ ಒಪಿ ಧಾನ್ಕರ್ ಬಿಹಾರದಿಂದ ಸೊಸೆಯನ್ನು ತಂದಿದ್ದಾರೆ. ಇತ್ತೀಚಿಗೆ ಕಾಶ್ಮೀರದ ಮಾರ್ಗವು ಸುಗಮವಾಗಿದ್ದು, ಕಾಶ್ಮೀರದಿಂದ ಯುವತಿಯನ್ನು ತರಬಹುದಾಗಿದೆ ಎಂದು ಕಟ್ಟರ್ ಹೇಳಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಯಶಸ್ವಿನ ಬಗ್ಗೆ ಮಾತನಾಡಿದ್ದಾಗ ಮನೋಹರ್ ಲಾಲ್ ಕಟ್ಟರ್ ಈ ಹೇಳಿಕೆ ನೀಡಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದಿಂದ ಹರಿಯಾಣದಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗನುಪಾತ ಪ್ರಮಾಣ ಹೆಚ್ಚಾಗಿದೆ ಎಂದು ಇದೇ ವೇಳೆ ಅವರು ಹೇಳಿದರು. ಕಡಿಮೆ ಪ್ರಮಾಣದ ಹೆಣ್ಣು ಮಕ್ಕಳ ಜನನದಿಂದ ರಾಜ್ಯ ಅಪಖ್ಯಾತಿಗೆ ಒಳಗಾಗಿತ್ತು. ಆದರೆ, ಸರ್ಕಾರ ಈ ಅಭಿಯಾನವನ್ನು ಆರಂಭಕ್ಕೂ ಮುನ್ನ ಹೆಣ್ಣು ಮಕ್ಕಳ ಸಂಖ್ಯೆ 1 ಸಾವಿರ ಗಂಡು ಮಕ್ಕಳಿಗೆ 850 ಹೆಣ್ಣು ಮಕ್ಕಳ ಪ್ರಮಾಣ ಇತ್ತು. ಬಳಿಕ ಈ ಸಂಖ್ಯೆ 933ಕ್ಕೆ ಏರಿಕೆಯಾಗಿದೆ. ಈ ಪ್ರಮಾಣವನ್ನು 1 ಸಾವಿರಕ್ಕೆ ತಲುಪಿಸಬೇಕಿದೆ ಎಂದು ಹೇಳಿದ್ದಾರೆ.
ಇದೇ ಅಗಸ್ಟ್ 7ರಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಇಂತಹದ್ದೇ ಹೇಳಿಕೆ ನೀಡಿದ್ದರು. ಆರ್ಟಿಕಲ್ 370 ರದ್ದು ಮಾಡಿರುವುದರಿಂದ ಪಕ್ಷದ ಕಾರ್ಯಕರ್ತರು ಸಂತಸಗೊಂಡಿದ್ದಾರೆ. ಕಾಶ್ಮೀರದ ಯುವತಿಯರನ್ನು ಇದೀಗ ಮದುವೆ ಮಾಡಿಕೊಳ್ಳಬಹುದು ಎಂದಿದ್ದರು. ಒಂದು ವೇಳೆ ಕಾಶ್ಮೀರದ ಯುವತಿಯನ್ನು ಉತ್ತರ ಪ್ರದೇಶದ ವ್ಯಕ್ತಿ ಮದುವೆಯಾದರೆ, ಆ ಯುವತಿ ಕಾಶ್ಮೀರದ ಪೌರತ್ವವನ್ನು ಕಳೆದುಕೊಳ್ಳುತ್ತಿದ್ದಳು. ಭಾರತ ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಪೌರತ್ವ ಇತ್ತು ಎಂದು ಸೈನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಬಳಿಕ ನಾನು ಯಾವುದೇ ರೀತಿಯ ನಿಂದನಾರ್ಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.