ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ, ಕೇಂದ್ರ ಆಹಾರ ಸಂಸ್ಕರಣಾ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕೃಷಿ ಸಂಬಂಧಿತ ಮಸೂದೆ ಮಂಡನೆಗೆ ಶಿರೋಮಣಿ ಅಕಾಲಿದಳ ಭಾರಿ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ನರೇಂದ್ರ ಮೋದಿ ಸಚಿವ ಸಂಪುಟದಿಂದ ಪಕ್ಷದ ಏಕೈಕ ಪ್ರತಿನಿಧಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಹರ್ಸಿಮ್ರತ್ ಅವರು ಆಡಳಿತಾರೂಢ ಮೋದಿ ಸರ್ಕಾರದಲ್ಲಿದ್ದ ಶಿರೋಮಣಿ ಅಕಾಲಿದಳದ ಏಕೈಕ ಪ್ರತಿನಿಧಿಯಾಗಿದ್ದರು.
ರೈತ ವಿರೋಧಿ ಮಸೂದೆ, ಕಾಯ್ದೆಗಳನ್ನು ವಿರೋಧಿಸಿ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ. ರೈತರ ಪರವಾಗಿ ನಿಲ್ಲಲು ಹೆಮ್ಮೆ ಆಗುತ್ತದೆ ಎಂದು ಹರ್ಸಿಮ್ರತ್ ಕೌರ್ ಬಾದಲ್ ಹೇಳಿಕೊಂಡಿದ್ದಾರೆ.
ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಪಕ್ಷದ ಮುಖ್ಯಸ್ಥ ಸುಖ್ಬಿರ್ ಸಿಂಗ್ ಬಾದಲ್, ಹೊಸ ಕೃಷಿ ಮಸೂದೆ ರೈತ ವಿರೋಧಿಯಾಗಿದೆ. ಹೊಸ ಕೃಷಿ ಮಸೂದೆಗಳನ್ನು ವಿರೋಧಿಸುವುದಾಗಿ ಹೇಳಿದ್ದಾರೆ.
ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವುದರಲ್ಲಿ ಯಶಸ್ವಿಯಾಗಿತ್ತು. ಇದಕ್ಕೆ ಬಿಜೆಪಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳವೂ ಸೇರಿದಂತೆ ಪ್ರತಿಪಕ್ಷಗಳು ಭಾರಿ ವಿರೋಧಿಸಿದ್ದವು.