ನವದೆಹಲಿ:ದೇಶಾದ್ಯಂತ ಇಂದಿನಿಂದ ಕೊರೊನಾ ವೈರಸ್ ಲಸಿಕೆ ವಿತರಣೆಯ ಡ್ರೈರನ್ ನಡೆಯುತ್ತಿದೆ. ಇದೇ ವಿಷಯವಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾತನಾಡಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ ಲಸಿಕೆ ವಿತರಣೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿರುವ ಅವರು, ಜನರಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಮೊದಲ ಹಂತದಲ್ಲಿ ಮೂರು ಕೋಟಿ ಮಂದಿ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ನೀಡಲಾಗುವುದು. ಇದರಲ್ಲಿ ಒಂದು ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ ಎಂದರು.
ಓದಿ: ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಮಾತ್ರ ಉಚಿತ ಕೋವಿಡ್ ಲಸಿಕೆ: ಹರ್ಷವರ್ಧನ್
ದೆಹಲಿಯಲ್ಲಿರುವ ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕೆ ಡ್ರೈರನ್ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವರು, ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಲಸಿಕೆ ಉಚಿತವಾಗಿ ಸಿಗಲಿದೆ ಎಂದಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಟ್ವಿಟರ್ನಲ್ಲೂ ಸ್ಪಷ್ಟನೆ ನೀಡಿದ್ದಾರೆ. ದೇಶಾದ್ಯಂತ ಉಚಿತವಾಗಿ ಲಸಿಕೆ ವಿತರಣೆ ಮಾಡಲಾಗುವುದು. ಮೊದಲ ಹಂತದಲ್ಲಿ ಅತಿ ಅವಶ್ಯವಾಗಿರುವವರಿಗೆ ಮಾತ್ರ ಇದು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಜತೆಗೆ ಜುಲೈ ವೇಳೆಗೆ 27 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗುವುದು. ಈ ಬಗ್ಗೆ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ದೇಶದ ಜನರಿಗೆ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.
ಆರಂಭದಲ್ಲಿ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿ ಬಗ್ಗೆ ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಈ ಹಿಂದೆ ಪೋಲಿಯೊ ಲಸಿಕೆ ಸಮಯದಲ್ಲಿ ವಿವಿಧ ರೀತಿಯ ವದಂತಿ ಹರಡಿದ್ದವು. ಆದರೆ ಜನರು ಲಸಿಕೆ ತೆಗೆದುಕೊಂಡಿದ್ದರಿಂದ ಭಾರತ ಇದೀಗ ಪೋಲಿಯೊ ಮುಕ್ತವಾಗಿದೆ ಎಂದು ಅವರು ತಿಳಿಸಿದರು.