ಜಿನೀವಾ: ಕೋವಿಡ್-19 ಲಾಕ್ಡೌನ್ನಿಂದಾಗಿ ರೋಗನಿರೋಧಕ ಲಸಿಕಾಕರಣ (ವ್ಯಾಕ್ಸಿನೇಶನ್) ಕಾರ್ಯಕ್ರಮಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವ್ಯಾಕ್ಸಿನ್ಗಳ ಮೂಲಕ ಇಷ್ಟು ದಿನ ತಡೆಗಟ್ಟಲಾದ ರೋಗಗಳು ಮರುಕಳಿಸುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಏ.24 ರಿಂದ 30 ರವರೆಗೆ ವಿಶ್ವ ರೋಗ ನಿರೋಧಕ ಲಸಿಕಾಕರಣ ಸಪ್ತಾಹ ಆಚರಿಸಲಾಗುತ್ತಿರುವ ಸಂದರ್ಭದಲ್ಲಿಯೇ ಡಬ್ಲ್ಯೂಎಚ್ಓ ಎಚ್ಚರಿಕೆ ನೀಡಿದೆ.
ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಅತಿ ಸಣ್ಣ ಅವಧಿಗೆ ರೋಗನಿರೋಧಕ ಲಸಿಕಾಕರಣ ಕಾರ್ಯಕ್ರಮಗಳನ್ನು ನಿಲ್ಲಿಸಿದರೂ ವ್ಯಾಕ್ಸಿನ್ಗಳಿಂದ ತಡೆಗಟ್ಟಬಹುದಾದ ದಡಾರ, ಪೋಲಿಯೊ ಮುಂತಾದ ಸಾಂಕ್ರಾಮಿಕ ರೋಗಗಳು ಮರುಕಳಿಸಬಹುದು. ಕಳೆದ ವರ್ಷ ಕಾಂಗೊ ದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ದಡಾರ ರೋಗಕ್ಕೆ 6 ಸಾವಿರ ಜನ ಬಲಿಯಾಗಿದ್ದರು. ಈಗ ಅಲ್ಲಿ ಎಬೋಲಾ ಸಾಂಕ್ರಾಮಿಕ ವೈರಸ್ ಹರಡುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಎಂಥದೇ ಸಮಯದಲ್ಲಿಯೂ ರೋಗ ನಿರೋಧಕ ಲಸಿಕಾಕರಣದ ಆರೋಗ್ಯ ಸೇವೆಗಳನ್ನು ನಿಲ್ಲಿಸಕೂಡದು ಎಂಬುದು ಇದರಿಂದ ಅರ್ಥವಾಗುತ್ತದೆ. ಒಂದೊಮ್ಮೆ ಬೇರೆ ರೋಗಗಳು ಕಾಣಿಸಿಕೊಂಡಲ್ಲಿ ಕೋವಿಡ್-19 ನೊಂದಿಗೆ ಹೋರಾಡುತ್ತಿರುವ ವ್ಯವಸ್ಥೆಯ ಮೇಲೆ ತಡೆಯಲಾಗದ ಪ್ರತಿಕೂಲ ಪರಿಣಾಮ ಬೀರುತ್ತದೆ.
"ಮಹಾಮಾರಿಗಳಿಂದ ಸುರಕ್ಷಿತವಾಗಿರಲು ವ್ಯಾಕ್ಸಿನ್ ಹಾಗೂ ಔಷಧಿಗಳು ಲಭ್ಯವಿರುವಾಗ ಅಂಥ ರೋಗಗಳು ಮರುಕಳಿಸುವಂತಾಗಬಾರದು. ಕೋವಿಡ್-19ಗೆ ವ್ಯಾಕ್ಸಿನ್ ತಯಾರಿಸಲು ಜಗತ್ತು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ ಈ ಮಧ್ಯೆ ವ್ಯಾಕ್ಸಿನ್ನಿಂದ ತಡೆಯಬಹುದಾದ ರೋಗಗಳು ಮರುಕಳಿಸುವ ಅಪಾಯವನ್ನು ಎದುರು ಹಾಕಿಕೊಳ್ಳಬಾರದು. ನಿಯಮಿತ ವ್ಯಾಕ್ಸಿನೇಶನ್ ನಿಲ್ಲಿಸಿದಲ್ಲಿ ಸಾಂಕ್ರಾಮಿಕ ರೋಗಗಳು ಶರವೇಗದಲ್ಲಿ ವಾಪಸ್ ಬರಬಹುದು." ಎನ್ನುತ್ತಾರೆ ಡಬ್ಲ್ಯೂಎಚ್ಓ ಮುಖ್ಯಸ್ಥ ಡಾ. ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್.
ಕೋವಿಡ್-19 ತಡೆಗಾಗಿ ಸುರಕ್ಷಿತ ಹಾಗೂ ಪರಿಣಾಮಕಾರಿ ವ್ಯಾಕ್ಸಿನ್ ಅಭಿವೃದ್ಧಿಪಡಿಸಲು ಹಲವಾರು ಪಾಲುದಾರರೊಂದಿಗೆ ಡಬ್ಲ್ಯೂಎಚ್ಓ ಕೆಲಸ ಮಾಡುತ್ತಿದ್ದು, ವಿಶ್ವದ ಎಲ್ಲರಿಗೂ ಸಮಾನವಾಗಿ ವ್ಯಾಕ್ಸಿನ್ ದೊರಕುವಂತಾಗಲು ಪ್ರಯತ್ನಿಸಲಾಗುತ್ತಿದೆ.
ಎಷ್ಟೇ ವೇಗವಾಗಿ ಕೆಲಸ ಮಾಡಿದರೂ ಕೋವಿಡ್-19 ವ್ಯಾಕ್ಸಿನ್ ಅಭಿವೃದ್ಧಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿರಬೇಕಾಗುತ್ತದೆ. ಜೊತೆಗೆ ಈಗಾಗಲೇ ಇರುವ ವ್ಯಾಕ್ಸಿನ್ಗಳ ಮೂಲಕ ಎಲ್ಲರನ್ನೂ ಸುರಕ್ಷಿತವಾಗಿರಿಸಬೇಕಿದೆ.