ಗುರುಗ್ರಾಮ್ :ಗುರುಗ್ರಾಮ್ ಪೊಲೀಸರು ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಣಿಗಾರಿಕೆ ಮಾಫಿಯಾ ತಂಡವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಾರ್ವಜನಿಕರ ಸೇವೆಗೆ ಇಲಾಖೆ ಸದಾ ಸಿದ್ಧ ಎಂಬ ಮಾಹಿತಿ ರವಾನಿಸಿದೆ.
ಗಣಿಗಾರಿಕೆ ಮಾಫಿಯಾವನ್ನು ಗುರುಗ್ರಾಮ್ ಪೊಲೀಸರು ಬೆನ್ನಟ್ಟುವ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಗಣಿಗಾರಿಕೆ ಮಾಫಿಯಾ ವಾಹನವನ್ನು ಪೊಲೀಸರು ಜೀಪ್ ಮೂಲಕ ಹಿಂದಿನಿಂದ ಚೇಸ್ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ.
ಭೋಂಡ್ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೈಸಿನಾ ಕ್ರಷರ್ ವಲಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಪಡೆದ, ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ತಂಡ ದಾಳಿ ನಡೆಸಿ ಬಂಧಿಸಲು ಮುಂದಾಗಿದೆ. ಆದರೆ, ಪೊಲೀಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಫಿಯಾ ತಂಡ ಮುಂದಾಗಿದೆ. ಆಗಲೂ ಪೊಲೀಸರು ಚೇಸ್ ಮಾಡಿ ಗ್ಯಾಂಗ್ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ, ಈ ಸಂದರ್ಭದಲ್ಲಿ ಚಾಲಕ ತಪ್ಪಿಸಿಕೊಂಡಿದ್ದಾನೆ ಎಂದು ಗಣಿಗಾರಿಕೆ ಕಾರ್ಯಪಡೆಯ ನೋಡಲ್ ಅಧಿಕಾರಿ ಪ್ರೀತ್ಪಾಲ್ ಸಿಂಗ್ ತಿಳಿಸಿದ್ದಾರೆ.
ಪೊಲೀಸ್ ತಂಡ ಏಕಾಏಕಿಯಾಗಿ ಮೂರು ಕಡೆಯಿಂದ ದಾಳಿ ನಡೆಸಿ, ಎಚ್‌ಆರ್ 74 - 6871 ಬಂದ ತಕ್ಷಣ ಡಂಪರ್ ನಿಲ್ಲುವಂತೆ ಸೂಚಿಸಿದೆ. ಆದರೆ, ಡಂಪರ್ ಚಾಲಕ ಅಧಿಕಾರಿಗಳ ದಾಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿ, ಹಠಾತ್ ದಾಳಿ ನಡೆಸಿದ್ದಾನೆ. ಇದರಿಂದಾಗಿ ಇನ್ಸ್‌ಪೆಕ್ಟರ್ ಆನಂದ್ ಮತ್ತು ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದರು.