ಚಮೋಲಿ(ಉತ್ತರಾಖಂಡ): ವಾರದ ಹಿಂದೆ ಉತ್ತರಾಖಂಡ್ನ ಚಮೋಲಿ ಜಿಲ್ಲೆಯ ಬೌಲಿ ಎಂಬಲ್ಲಿ ಗುಪ್ತಾ ಫ್ಯಾಮಿಲಿ 200ಕೋಟಿ ರೂ ವೆಚ್ಚದಲ್ಲಿ ತನ್ನ ಮಗನ ಮದುವೆ ಕಾರ್ಯಕ್ರಮ ಆಯೋಜಿಸಿದ್ದರು. ಇದೀಗ ಸ್ಥಳದಲ್ಲಿ ಬಿದ್ದಿರುವ ತ್ಯಾಜ್ಯ ಶುಚಿಗೊಳಿಸಲು ಈ ಶ್ರೀಮಂತ ಕುಟುಂಬ ಪುರಸಭೆಗೆ 54 ಸಾವಿರ ರೂ ಠೇವಣಿ ನೀಡಿದೆ.
ಮದುವೆ ಮುಗಿದ ಬೆನ್ನಲ್ಲೇ ಅಲ್ಲಿ ಎಸೆಯಲ್ಪಟ್ಟಿದ್ದ ತ್ಯಾಜ್ಯ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ತ್ಯಾಜ್ಯ ನಿರ್ವಹಣೆಗಾಗಿ ಗುಪ್ತಾ ಫ್ಯಾಮಿಲಿ ಇದೀಗ 54 ಸಾವಿರ ರೂ ನೀಡಿದ್ದು ಖರ್ಚು ಹೆಚ್ಚಾದಲ್ಲಿ ಭರಿಸುವುದಾಗಿ ಹೇಳಿದೆ.
ಗುಪ್ತಾ ಫ್ಯಾಮಿಲಿ ಈಗಾಗಲೇ 54 ಸಾವಿರ ರೂ ಠೇವಣಿ ಇರಿಸಿದ್ದಾರೆ. ಸದ್ಯ 150 ಕ್ವಿಂಟಾಲ್ ತ್ಯಾಜ್ಯವನ್ನು ಸ್ಥಳದಿಂದ ರವಾನೆ ಮಾಡಲಾಗಿದೆ. ತ್ಯಾಜ್ಯ ಸಂಪೂರ್ಣವಾಗಿ ವಿಲೇವಾರಿ ಆದ ಬಳಿಕ ಖರ್ಚುವೆಚ್ಚದ ವಿವರವನ್ನು ಗುಪ್ತಾ ಕುಟುಂಬಸ್ಥರಿಗೆ ಕಳುಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷರು ಹೇಳಿದ್ದಾರೆ.
ಬೌಲಿ ಪ್ರದೇಶದಲ್ಲಿ ಜೂನ್ 20ರಿಂದ 22ರವರೆಗೆ ಗುಪ್ತಾ ಫ್ಯಾಮಿಲಿಯ ಅಜಯ್ ಗುಪ್ತಾ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಸಾವಿರಾರು ಅತಿಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸ್ಥಳದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಬಿದ್ದಿತ್ತು.
ಈ ಮದುವೆ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಮದುವೆ ಕಾರ್ಡ್ ಸಿದ್ಧಪಡಿಸಲಾಗಿತ್ತು. ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಬಾಲಿವುಡ್ ನಟಿ ಕತ್ರಿನಾ ಕೈಪ್, ಯೋಗಗುರು ಬಾಬಾ ರಾಮದೇವ್ ಸೇರಿದಂತೆ ಗಣ್ಯಾತಿಗಣ್ಯರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಪ್ಲಾಸ್ಟಿಕ್ ಬಾಟಲಿ, ಆಹಾರದ ಪ್ಯಾಕೆಟ್, ಹೂವಿನ ಮಾಲೆಗಳು ಸೇರಿ ಅನೇಕ ತ್ಯಾಜ್ಯಗಳು ಸ್ಥಳದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದವು.