ಅಹಮದಾಬಾದ್(ಗುಜರಾತ್) :ಸಾಬರಮತಿ ಆಶ್ರಮದ 8 ರಿಂದ 15 ವಯಸ್ಸಿನೊಳಗಿನ 15 ವಿದ್ಯಾರ್ಥಿಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೋಡ್ ಶೋ ವೇಳೆ ಮಲ್ಲಕಂಬ ಪ್ರದರ್ಶನ ಮಾಡಲಿದ್ದಾರೆ.
ಮಲ್ಲಕಂಬ ದೇಸಿ ಕ್ರೀಡೆ. ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಇದು ಕಂಬದ ಮೇಲೆ ನಡೆಸುವ ಕಸರತ್ತಾಗಿದ್ದು, ಕೆಲ ನಿಯಮಗಳನ್ನು ಹೊಂದಿದೆ. ಹಾಗಾಗಿ ಸಾಬರಮತಿ ಆಶ್ರಮದ ವಿದ್ಯಾರ್ಥಿಗಳು ಈ ಭಾರತದ ಅಪ್ಪಟ ದೇಸಿ ಸಾಂಪ್ರದಾಯಿಕ ಕ್ರೀಡೆಯನ್ನು ಅಮೆರಿಕದ ಅಧ್ಯಕ್ಷ ಡೊಲಾಲ್ಡ್ ಟ್ರಂಪ್ ಎದುರು ಪ್ರದರ್ಶಿಸಲಿದ್ದಾರೆ.
ಇನ್ನೇನು ಟ್ರಂಪ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅವರನ್ನು ಸ್ವಾಗತಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳು ಆಗಿವೆ. ಸಾಬರಮತಿ ಆಶ್ರಮದ ಒಂದು ನಿರ್ದಿಷ್ಟ ಸ್ಥಳದಲ್ಲಿ ವಿದ್ಯಾರ್ಥಿಗಳು ಸುಮಾರು 3 ತಾಸು ಈ ಮಲ್ಲಕಂಬ ಪ್ರದರ್ಶನ ನೀಡಲಿದ್ದಾರೆ. ಸದ್ಯ ಜಯೇಶ್ ಕಚಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಾಲೀಮು ನಡೆಸುತ್ತಿದ್ದಾರೆ.
ಮೊಟೇರಾ ಕ್ರೀಡಾಂಗಣದಲ್ಲಿ ಟ್ರಂಪ್ ಭಾಷಣವಿದೆ. ಅದಕ್ಕೂ ಮೊದಲು ರೋಡ್ ಶೋ ನಡೆಯಲಿದೆ. ಹಾಗೆಯೇ ಸಾಬರಮತಿ ಆಶ್ರಮಕ್ಕೂ ಟ್ರಂಪ್ ಬರುವುದು ಕಾರ್ಯಕ್ರಮದ ವೇಳಾ ಪಟ್ಟಿಯಲ್ಲಿದೆ. ಪ್ರಧಾನಿ ಮೋದಿ, ಟ್ರಂಪ್ ಮತ್ತು ಅವರ ಧರ್ಮಪತ್ನಿ ಮೆಲನಿಯಾ ಅವರಿಗೆ ವಿಶೇಷ ಆಸನಗಳನ್ನೂ ಆಶ್ರಮದಲ್ಲಿರಿಸಲಾಗಿದೆ.
ಈಗಾಗಲೇ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ರಾಜ್ಯ, ರಾಷ್ಟ್ರ ಸೇರಿ ಅಮೆರಿಕದ ಭದ್ರತಾ ಸಿಬ್ಬಂದಿ ಕೂಡಾ ಇಂದು ಭದ್ರತೆ ಪರಿಶೀಲನೆ ನಡೆಸಲಿದ್ದಾರೆ.