ನವದೆಹಲಿ:ಹಸಿರು ವಲಯಗಳಲ್ಲಿ ವಿದೇಶದಿಂದ ಬಂದವರಿಗೆ ಮತ್ತು ಇತರ ರಾಜ್ಯಗಳಿಂದ ಹಿಂದಿರುಗಿದವರಿಗೆ ಆರ್‌ಟಿ-ಪಿಸಿಆರ್ ಆಧಾರಿತ ಪೂಲ್ಡ್ ಸ್ಯಾಂಪಲಿಂಗ್‌ಗಾಗಿ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಸರ್ಕಾರ ಅಧಿಕೃತ ಪ್ರಕಟಣೆ ತಿಳಿಸಿದೆ.
ಮಾರ್ಗಸೂಚಿಗಳ ಪ್ರಕಾರ, 25 ಜನರ ಸಮೂಹವನ್ನು ಗುರುತಿಸಲಾಗುವುದು. ಐಸಿಎಂಆರ್ ನಿಗದಿಪಡಿಸಿದ ಪ್ರೋಟೋಕಾಲ್ ಪ್ರಕಾರ ತರಬೇತಿ ಪಡೆದ ಪ್ರಯೋಗಾಲಯದ ಸಿಬ್ಬಂದಿ ಸೂಕ್ತವಾದ ರಕ್ಷಣಾತ್ಮಕ ಗೇರ್ ಅಡಿ ಏಪ್ರಾನ್ಗಳು, ಕೈ ಗವಸುಗಳು, ಫೇಸ್ ಶೀಲ್ಡ್ ಅಥವಾ ಕನ್ನಡಕಗಳು, ಮತ್ತು ಎನ್ -95 ಮಾಸ್ಕ್ಗಳನ್ನು ಧರಿಸಿ, ಅವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪಡೆದು ಪರೀಕ್ಷೆ ನಡೆಸುತ್ತಾರೆ.
ಮಾದರಿಯ ಕಂಟೇನರ್‌ನಲ್ಲಿ ಟೆಸ್ಟಿ (ಪರೀಕ್ಷೆಗೆ ಒಳಪಡುವ ವ್ಯಕ್ತಿ) ವಿವರಗಳೊಂದಿಗೆ ಸರಿಯಾದ ಲೇಬಲಿಂಗ್ ಮಾಡಬೇಕು. ಅಂತಹ ಸಮೂಹದ 25 ಮಾದರಿಗಳನ್ನು ಟ್ರಿಪಲ್ ಲೇಯರ್ ಪ್ಯಾಕೇಜಿಂಗ್‌ನಲ್ಲಿ ಪ್ಯಾಕ್ ಮಾಡಲಾಗುವುದು ಮತ್ತು ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ಕೋಲ್ಡ್-ಚೈನ್ ಮೂಲಕ ಗುರುತಿಸಲಾದ ಪ್ರಯೋಗಾಲಯಕ್ಕೆ ಸಾಗಿಸಲಾಗುವುದು ಎಂದು ಮಾರ್ಗಸೂಚಿ ತಿಳಿಸಿದೆ.
25 ಮಾದರಿಗಳಿಂದ ಪೂಲ್ಡ್ ಮಾಡಲಾದ ಮಾದರಿಗಳನ್ನು ಆರ್‌ಟಿ-ಪಿಸಿಆರ್ ವಿಧಾನದಿಂದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು. ಯಾವುದೇ ಪೂಲ್ ಮಾಡಲಾದ ಮಾದರಿಗಳು ಕೊರೊನಾ ಪಾಸಿಟಿವ್ ಬಂದರೆ ಅವುಗಳನ್ನು ಸಂರಕ್ಷಿತ ಮಾದರಿಗಳಿಂದ ಪ್ರತ್ಯೇಕಿಸಿ ಪರೀಕ್ಷಿಸಿ ಮರು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮಾರ್ಗಸೂಚಿ ಹೇಳುತ್ತದೆ.