ಮಥುರಾ: ಬಾಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತನನ್ನು ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬ ಥಳಿಸಿರುವ ಘಟನೆ ನಡೆದಿದೆ. ಇದರ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಶ್ವ ಪ್ರಸಿದ್ಧ ಬಾಂಕೆ ಬಿಹಾರಿ ಮಂದಿರದಲ್ಲಿ ಭಕ್ತನಿಗೆ ಥಳಿಸಿ ಹೊರದಬ್ಬಿದ ಗಾರ್ಡ್... ಹೊಸ ವರ್ಷದ ಪ್ರಯುಕ್ತ ವಿಶ್ವಪ್ರಸಿದ್ಧ ಬಾಂಕೆ ಬಿಹಾರಿ ದೇವಾಲಯದಲ್ಲಿರುವ ಠಾಕೂರ್ ಜಿ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಬೃಂದಾವನಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಾಲಯದ ಆಡಳಿತವು ಜನವರಿ 1 ರಂದು 10,000 ಯಾತ್ರಾರ್ಥಿಗಳ ಆಗಮನವನ್ನು ಅಂದಾಜು ಮಾಡಿತ್ತು. ಆದರೆ, 25 ಸಾವಿರಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದ ಸಂಕೀರ್ಣದಲ್ಲಿ ಜನಸಂದಣಿ ನಿಯಂತ್ರಿಸಲು ಸೆಕ್ಯುರಿಟಿ ಗಾರ್ಡ್‌ಗಳು ಹರಸಾಹಸ ಪಡುತ್ತಾರೆ. ಇನ್ನೂ ಎಷ್ಟೋ ಬಾರಿ ಗಾರ್ಡ್‌ಗಳು ಭಕ್ತರ ಮೇಲೆ ಕೈಮಾಡುವುದು ಇಲ್ಲಿ ಸಾಮಾನ್ಯವೇ.
ಠಾಕೂರ್ ಜಿ ದರ್ಶನಕ್ಕೆಂದು ನೂಕು ನುಗ್ಗಲಲ್ಲೂ ಕಷ್ಟಪಟ್ಟು ಬರೋ ಭಕ್ತರು ದೇವಾಲಯದ ಭದ್ರತಾ ಸಿಬ್ಬಂದಿಯ ಬೆದರಿಕೆಗೆ, ಥಳಿತಕ್ಕೆ ಬಲಿಯಾಗುತ್ತಾರೆ.
ಜನವರಿ 1 ರಂದು ದೇವಾಲಯದ ಆವರಣದಲ್ಲಿ ನಿಯೋಜಿಸಲಾದ ಸೆಕ್ಯುರಿಟಿ ಗಾರ್ಡ್‌ಗಳು 50 ವರ್ಷದ ವ್ಯಕ್ತಿಯನ್ನು ಥಳಿಸಿರುವ ಘಟನೆ ನಡೆದಿದೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಆತನನ್ನು ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಕೊನೆಗೂ ಭದ್ರತಾ ಸಿಬ್ಬಂದಿ ವೃದ್ಧನನ್ನು ಎಳೆದೊಯ್ದು ದೇವಾಲಯದ ಆವರಣದಿಂದ ಹೊರಗೆ ದೂಡಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳು ಭಕ್ತರನ್ನು ಥಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ, ಭದ್ರತಾ ಸಿಬ್ಬಂದಿಯ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಇನ್ನಷ್ಟು ಆತಂಕಕ್ಕೀಡುಮಾಡಿದೆ.