ಭೋಪಾಲ್: ಇಂದೋರಿನ ಸಿಗರೇಟ್ ತಯಾರಿಕಾ ಕಂಪನಿಯೊಂದರ ಮೇಲೆ ದಾಳಿ ಮಾಡಿರುವ ಜಿಎಸ್ಟಿ ವಿಚಕ್ಷಣಾ ದಳದ ಅಧಿಕಾರಿಗಳು, ಕಂಪನಿಯು ಸರ್ಕಾರಕ್ಕೆ ಕಳೆದೊಂದು ವರ್ಷದಲ್ಲಿ 105 ಕೋಟಿ ರೂ. ಜಿಎಸ್ಟಿ ವಂಚನೆ ಮಾಡಿರುವುದನ್ನು ಬಯಲಿಗೆಳೆದಿದ್ದಾರೆ.
ಇಲ್ಲಿನ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ ಕಚೇರಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ಕಾರ್ಖಾನೆಯು ಕಟ್ಟಡದ ಹಿಂದಿನ ಭಾಗದಲ್ಲಿ ಗುಪ್ತ ಮಾರ್ಗವೊಂದನ್ನು ಹೊಂದಿದ್ದು, ಈ ಮಾರ್ಗದ ಮೂಲಕ ಕಚ್ಚಾ ವಸ್ತುಗಳು ಒಳ ಬಂದು ತಯಾರಾದ ಮಾಲು ಹೊರ ಹೋಗುತ್ತಿದ್ದವು ಎಂಬುದು ದಾಳಿಯ ವೇಳೆ ಪತ್ತೆಯಾಗಿದೆ. ಕಾರ್ಖಾನೆಯಲ್ಲಿನ ನಿಜವಾದ ಉತ್ಪಾದನಾ ಪ್ರಮಾಣವನ್ನು ಮುಚ್ಚಿಡಲು ಜನರೇಟರ್ ವಿದ್ಯುತ್ ಬಳಸಿ ಯಂತ್ರಗಳನ್ನು ನಡೆಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಈ ಸಿಗರೇಟ್ ತಯಾರಿಕಾ ಕಾರ್ಖಾನೆಯು ಏಪ್ರಿಲ್ 2019ರಿಂದ ಮೇ 2020ರ ಒಳಗೆ ಕೇವಲ ಒಂದು ವರ್ಷದ ಅವಧಿಯಲ್ಲಿ ಸರ್ಕಾರಕ್ಕೆ 105 ಕೋಟಿ ರೂ. ಜಿಎಸ್ಟಿ ವಂಚನೆ ಮಾಡಿದೆ. ವಂಚನೆಯ ಈ ಅಂಕಿ-ಅಂಶಗಳು ಕೇವಲ ಆರಂಭಿಕವಾಗಿದ್ದು, ತನಿಖೆ ಮುಂದುವರಿದಂತೆ ಇನ್ನಷ್ಟು ದೊಡ್ಡ ಪ್ರಮಾಣದ ಹಣಕಾಸು ವಂಚನೆಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ ಎಂದು ಜಿಎಸ್ಟಿ ಅಧಿಕಾರಿಗಳು ಹೇಳಿದ್ದಾರೆ.
ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ವ್ಯಕ್ತಿಯನ್ನು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ಅಧಿಕಾರಿಗಳು ಬಂಧಿಸಿದ್ದರು. ತಾನೊಂದು ದಿನಪತ್ರಿಕೆಯನ್ನು ಆರಂಭಿಸಿ, ಪ್ರತಿದಿನ ಅದರ ಪ್ರಸಾರ ಸಂಖ್ಯೆಯು 1.2 ಲಕ್ಷದಿಂದ 1.5 ಲಕ್ಷ ಎಂಬುದಾಗಿ ತೋರಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ವಾಸ್ತವದಲ್ಲಿ ಪತ್ರಿಕೆಯ ಪ್ರಸಾರ ಸಂಖ್ಯೆ ಕೇವಲ 4ರಿಂದ 6 ಸಾವಿರ ಮಾತ್ರ ಇತ್ತು. ಜೊತೆಗೆ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿರುವುದಾಗಿ ಸುಳ್ಳು ಬಿಲ್ ಸೃಷ್ಟಿಸಿ ಆದಾಯ ತೋರಿಸಿದ್ದಾನೆ. ಈ ಮೂಲಕ ತನ್ನ ನಿಜವಾದ ವ್ಯವಹಾರವಾದ ಪಾನ್ ಮಸಾಲಾ ಹಾಗೂ ಸಿಗರೇಟ್ ದಂಧೆಯಲ್ಲಿ ಬಂದ ಲಾಭಕ್ಕೆ ತೆರಿಗೆ ಕಟ್ಟದೆ ಅದನ್ನು ದಿನ ಪತ್ರಿಕೆಯ ವ್ಯವಹಾರಕ್ಕೆ ತಳುಕು ಹಾಕಿ ಸರ್ಕಾರಕ್ಕೆ ವಂಚನೆ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಡೀ ಪ್ರಕರಣದಲ್ಲಿನ ವಂಚನೆಯ ಜಾಲ ಇನ್ನೂ ಆಳವಾಗಿದ್ದು, ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಜಿಎಸ್ಟಿ ಕಚೇರಿ ತಿಳಿಸಿದೆ.