ನವದೆಹಲಿ:ಜಿಎಸ್‌ಟಿ ಪರಿಹಾರದ ವಿಷಯದಲ್ಲಿ ಕೇಂದ್ರವು ನೀಡಿರುವ ಆಯ್ಕೆಗಳನ್ನು ತಿರಸ್ಕರಿಸಬೇಕು ಮತ್ತು ಒಂದೇ ಧ್ವನಿಯಲ್ಲಿ ಹಣಕ್ಕೆ ಬೇಡಿಕೆ ಇಡಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ರಾಜ್ಯಗಳನ್ನು ಒತ್ತಾಯಿಸಿದ್ದಾರೆ.
ಜಿಎಸ್‌ಟಿ ಬಾಕಿ ಇರುವುದರಿಂದ ಆದಾಯ ನಷ್ಟವನ್ನು ಸರಿದೂಗಿಸಲು ಹೆಚ್ಚಿನ ಸಾಲವನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ, ರಾಜ್ಯಗಳನ್ನು ಕೇಳಿದ ನಂತರ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.
"ರಾಜ್ಯಗಳು ಆಯ್ಕೆಗಳು ಮತ್ತು ಬೇಡಿಕೆ ಎರಡನ್ನೂ ಒಂದೇ ಧ್ವನಿಯಲ್ಲಿ ತಿರಸ್ಕರಿಸಬೇಕು. ಕೇಂದ್ರವು ಸಂಪನ್ಮೂಲಗಳನ್ನು ಕಂಡುಹಿಡಿಯಬೇಕು ಮತ್ತು ರಾಜ್ಯಗಳಿಗೆ ಹಣವನ್ನು ಒದಗಿಸಬೇಕು" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
"ಜಿಎಸ್‌ಟಿ ಪರಿಹಾರದ ಅಂತರವನ್ನು ನಿವಾರಿಸಲು ಮೋದಿ ಸರ್ಕಾರ ರಾಜ್ಯಗಳಿಗೆ ನೀಡಿದ ಎರಡು ಆಯ್ಕೆಗಳು ಕಾನೂನಿನ ಸಂಪೂರ್ಣ ಉಲ್ಲಂಘನೆ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಾಗಿದೆ". ಎರಡೂ ಆಯ್ಕೆಗಳಲ್ಲಿ ಕೇಂದ್ರ ಸರ್ಕಾರವು ಹಣಕಾಸಿನ ಹೊರೆಯ ಮೊತ್ತವನ್ನು ರಾಜ್ಯಗಳಿಗೆ ರವಾನಿಸುತ್ತಿದೆ ಎಂದಿದ್ದಾರೆ.
"ರಾಜ್ಯಗಳ ಮೇಲಿನ ಇತ್ತೀಚಿನ ಆಕ್ರಮಣವು ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಮತ್ತು ಹಣಕ್ಕಾಗಿ ಕೇಂದ್ರದಿಂದ ಭಿಕ್ಷೆ ಬೇಡುವಂತೆ ಮಾಡುವುದು ಮೋದಿ ಸರ್ಕಾರದ ವಿನ್ಯಾಸದ ಭಾಗವಾಗಿದೆ" ಎಂದು ಚಿದಂಬರಂ ಅರೋಪಿಸಿದ್ದಾರೆ.