ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ವೈಷಮ್ಯವನ್ನು ತಿಳಿಗೊಳಿಸಬಲ್ಲ ಕರ್ತಾಪುರ ಗುರುದ್ವಾರಕ್ಕೆ ನಾಳೆಯಿಂದ ಭಾರತೀಯರು ನೇರವಾಗಿ ಪ್ರವೇಶಿಸಬಹುದು. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕರ್ತಾರ್‌ಪುರ ಕಾರಿಡಾರ್’ ಅನ್ನು ನ. 9 ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ. ಗುರುನಾನಕ್ ಅವರ 550ನೇ ಜನ್ಮದಿನಕ್ಕೂ (ನವೆಂಬರ್ 12) ಮುನ್ನ ಕಾರಿಡಾರ್ ಬಳಕೆಗೆ ಲಭ್ಯವಾಗಲಿದ್ದು, ಸಿಖ್ ಸಮುದಾಯದ ದಶಕಗಳ ಬೇಡಿಕೆ ಕಾರ್ಯರೂಪಕ್ಕೆ ಬರುತ್ತಿದೆ. ಈ ಯೋಜನೆ ಏನು? ಇದರಿಂದ ಭಾರತ-ಪಾಕಿಸ್ತಾನಕ್ಕೆ ಏನು ಲಾಭ ಬನ್ನಿ ನೋಡಿಬರೋಣ.
ಡೇರಾ ಬಾಬಾ ನಾನಕ್ ವರದಿ ಪ್ರತ್ಯಕ್ಷ ವರದಿ ಗುರುನಾನಕ್ ಅವರ 550ನೇ ಜನ್ಮದಿನ ನಿಮಿತ್ತ ಪಾಕಿಸ್ತಾನದಲ್ಲಿರುವ ಕರ್ತಾಪುರ್ ಸಾಹೀಬ್ಗೆ ಭಾರತೀಯರು ನೇರವಾಗಿ ಪ್ರವೇಶಿಸುವ ಸಲುವಾಗಿ ಭಾರತ-ಪಾಕ್ ಸರ್ಕಾರಗಳು ಜಂಟಿಯಾಗಿ ಕರ್ತಾಪುರ್ ಕಾರಿಡಾರ್ ನಿರ್ಮಿಸಿದ್ದು, ಸಿಖ್ ಧರ್ಮೀಯರಿಗೆ ಇದು ವರದಾನ. ಹಳಸಿರುವ ಭಾರತ ಮತ್ತು ಪಾಕ್ ಸಂಬಂಧವನ್ನು ತಹಬದಿಗೆ ತರುವಲ್ಲಿ ಈ ಕಾರಿಡಾರ್ ಪ್ರಮುಖ ಪಾತ್ರ ವಹಿಸಬಹುದು ಎನ್ನಲಾಗುತ್ತಿದೆ. ಈ ಯೋಜನೆಯ ಒಂದು ಒಳನೋಟ ನೋಡೋದಾದರೆ,
125 ಕಿ.ಮೀ. ಪ್ರಯಾಣ :
ಪ್ರಸ್ತುತ ಭಾರತದ ಯಾತ್ರಿಕರು ಲಾಹೋರ್ ಮೂಲಕ ಕರ್ತಾರ್ ಪುರ ತಲುಪಲು ಬಸ್‌ನಲ್ಲಿ 125 ಕಿ.ಮೀ ಪ್ರಯಾಣಿಸಬೇಕಿದೆ.
1400 ರೂ. ಸೇವಾಶುಲ್ಕ :
ಪ್ರತಿ ಯಾತ್ರಾರ್ಥಿ ಒಂದು ದಿನದ ಭೇಟಿಗೆ ಸೇವಾ ಶುಲ್ಕವಾಗಿ 20 ಅಮೆರಿಕನ್ ಡಾಲರ್ ಅಂದರೆ ಸುಮಾರು 1,400 ರೂಪಾಯಿ ಅನ್ನು ಪಾಕಿಸ್ತಾನಕ್ಕೆ ಪಾವತಿಸಬೇಕಿದೆ. ಈ ದರವನ್ನು ತೆಗೆದುಹಾಕುವಂತೆ ಭಾರತ ಒತ್ತಾಯಿಸಿದ್ದು, ಇನ್ನಷ್ಟೇ ಸ್ಪಷ್ಟ ನಿರ್ಧಾರ ಪ್ರಕಟವಾಗಬೇಕಿದೆ.
ಕಾರಿಡಾರ್‌ನಲ್ಲಿ ಏನೇನಿದೆ?
ಅಂತಾರಾಷ್ಟ್ರೀಯ ಗುಣಮಟ್ಟದ ಹೋಟೆಲ್, ನೂರಾರು ಅಪಾರ್ಟ್‌ಮೆಂಟ್‌ಗಳು, ಎರಡು ವಾಣಿಜ್ಯ ಕೇಂದ್ರ, ಎರಡು ಕಾರು ನಿಲುಗಡೆ ತಾಣಗಳು, ವಿದ್ಯುತ್ ಕೇಂದ್ರ, ಪ್ರವಾಸಿ ಮಾಹಿತಿ ಕೇಂದ್ರ, ಸರ್ಕಾರಿ ಕಚೇರಿಗಳನ್ನು ಈ ಯೋಜನೆ ಒಳಗೊಂಡಿದೆ
ಖಲಿಸ್ತಾನ್ ಬೆಂಬಲಿಗರ ಆತಂಕ :
ಪಾಕಿಸ್ತಾನ ಬೆಂಬಲಿತ ಖಲಿಸ್ತಾನ್ ಪರ ಪ್ರತ್ಯೇಕತಾವಾದಿ ಚಳವಳಿಗೆ ಕರ್ತಾರ್‌ಪುರ ಗುರುದ್ವಾರವು ಬಳಕೆಯಾಗುವ ಆತಂಕ ಭಾರತದ್ದು, ಪಾಕಿಸ್ತಾನದ ಸಿಖ್ ಗುರುದ್ವಾರ ಪ್ರತಿಬಂಧಕ ಸಮಿತಿಯ ಕೆಲ ಸಿಬ್ಬಂದಿ ಖಲಿಸ್ತಾನ್ ಪರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದು, ಗುರುದ್ವಾರದ ಪ್ರವರ್ತಕರೂ ಆಗಿದ್ದಾರೆ ಎಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಪಾಕಿಸ್ತಾನಕ್ಕೆ ಏನು ಲಾಭ?
- ಪಾಕಿಸ್ತಾನದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ
- ಯಾತ್ರಾರ್ಥಿಗಳ ಭೇಟಿಯಿಂದ ಸ್ಥಳೀಯ ಆರ್ಥಿಕತೆಗೆ ನೆರವು
- ಯಾತ್ರಿಕರ ಭೇಟಿಯಿಂದ ಪಾಕ್ ಸರ್ಕಾರಕ್ಕೆ 3.6 ಕೋಟಿ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ
- ಸಂಚಾರ, ಆತಿಥ್ಯ ಸೇರಿ ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿ
- ಭಾರತದ ಜತೆಗಿನ ಉದ್ವಿಗ್ನ ಸ್ಥಿತಿ ಶಮನಕ್ಕೆ ನೆರವಾಗಬಹುದು
ಡೇರಾ ಬಾಬಾ ನಾನಕ್ ವರದಿ ಪ್ರತ್ಯಕ್ಷ ವರದಿ
ವೀಸಾ ಅಗತ್ಯವಿಲ್ಲ :
- ಕರ್ತಾರ್‌ಪುರಕ್ಕೆ ಭೇಟಿ ನೀಡುವ ಭಾರತದ ಸಿಖ್ ಯಾತ್ರಿಗಳಿಗೆ ವೀಸಾ ಬೇಕಿಲ್ಲ
- ಒಸಿಐ ಕಾರ್ಡ್ ಹೊಂದಿರುವ ಅನಿವಾಸಿ ಭಾರತೀಯರೂ ಭೇಟಿ ನೀಡಬಹುದು
- ವರ್ಷಪೂರ್ತಿ ಅಂದರೆ ವಾರದ ಏಳೂ ದಿನ ಯಾತ್ರಿಕರ ಭೇಟಿಗೆ ಅವಕಾಶವಿದೆ
- ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿ ತೆರಳಲು ಅವಕಾಶ
- ₹11 ಸಾವಿರ ಹಣ, 7 ಕೆ.ಜಿ ತೂಕದ ಬ್ಯಾಗ್ ಒಯ್ಯಬಹುದು
- ಯಾತ್ರಿಕರು ಬಯೋಮೆಟ್ರಿಕ್ ತಪಾಸಣೆಗೆ ಒಳಗಾಗಬೇಕಿದೆ
- 10 ದಿನಗಳ ಮುನ್ನವೇ ಯಾತ್ರಿಕರ ಪಟ್ಟಿಯನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು
- ಉಭಯ ದೇಶಗಳ ಗಡಿಯಲ್ಲಿ 88 ವಲಸೆ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ