ಲಖನೌ (ಉತ್ತರ ಪ್ರದೇಶ):ಔದ್ನ ಸಾಮ್ರಾಜ್ಯದ ಕೊನೆಯ ರಾಜ ನವಾಬ್ ವಾಜಿದ್ ಅಲಿ ಷಾ ಅವರ ಮೊಮ್ಮಗ ರಾಜಕುಮಾರ ಕೌಕಾಬ್ ಖಾದರ್ ಸಜ್ಜಾದ್ ಅಲೀ ಮಿರ್ಝಾ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
87 ವರ್ಷದ ಕೌಕಾಬ್ ಅವರಿಗೆ ಒಂದು ವಾರದ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಹೀಗಾಗಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಿಸದೆ ಕೋಲ್ಕತ್ತಾದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಲಖನೌನ ಪ್ರಸಿದ್ಧ ಖಂಡಾನ್-ಎ-ಇಜ್ತೇಹಾದ್ ಮನೆತನಕ್ಕೆ ಸೇರಿದ ಅವರು, ಪತ್ನಿ, ಇಬ್ಬರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೌಕಾಬ್ರವರು, ಕೋಲ್ಕತ್ತಾದ ಮಾಟಿಯಾಬುರ್ಜ್‌ನಲ್ಲಿರುವ ಸಿಬ್ಟಿನಾಬಾದ್ ಇಮಾಂಬರಾ ಟ್ರಸ್ಟ್‌ನ ಹಿರಿಯ ಟ್ರಸ್ಟಿಯಾಗಿದ್ದರು. ಅಲ್ಲಿ ಅವರ ಮುತ್ತಜ್ಜ ನವಾಬ್ ವಾಜಿದ್ ಅಲಿ ಷಾ ಅವರ ಸಮಾಧಿ ಮಾಡಲಾಗಿದೆ. ಡಾ. ಎಂ.ಕೌಕುಬ್ ಎಂದೇ ಖ್ಯಾತರಾಗಿದ್ದ ಪ್ರಿನ್ಸ್ ಕೌಕಾಬ್ ಖಾದರ್ ಸಜ್ಜಾದ್ ಅಲಿ ಮಿರ್ಝಾ ಅವರು, ವಾಜಿದ್ ಅಲಿ ಷಾ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಗಳ ಕುರಿತು ನಡೆಸಿದ ಅಧ್ಯಯನಕ್ಕಾಗಿ ಅಲೀಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಉರ್ದು ಭಾಷೆಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಅದೇ ವಿಶ್ವವಿದ್ಯಾಲಯಲ್ಲಿ 1993ರಲ್ಲಿ ಉರ್ದು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.
ಡಾ. ಎಂ.ಕೌಕುಬ್, ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫ್ರಾಟರ್ನಿಟಿಯಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು. ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಶನ್ ಆಫ್ ಇಂಡಿಯಾ, ದಿ ವೆಸ್ಟ್ ಬೆಂಗಾಲ್ ಬಿಲಿಯರ್ಡ್ಸ್ ಅಸೋಸಿಯೇಷನ್ ಮತ್ತು ಉತ್ತರ ಪ್ರದೇಶ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಅಸೋಸಿಯೇಷನ್‌ನ ಸ್ಥಾಪಕ ಕಾರ್ಯದರ್ಶಿಯಾಗಿದ್ದರು.
1963-64ರಲ್ಲಿ ಕೋಲ್ಕತ್ತಾದ ಐಕಾನಿಕ್ ಗ್ರೇಟ್ ಈಸ್ಟರ್ನ್ ಹೋಟೆಲ್‌ನಲ್ಲಿ ನಡೆದ ಪ್ರಥಮ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಮುಖ್ಯ ರೆಫರಿಯಾಗಿದ್ದರು ಎಂದು ಅವರ ಮಗ ಇರ್ಫಾನ್ ಅಲಿ ಮಿರ್ಝಾ ಹೇಳಿದ್ದಾರೆ. 70ರ ದಶಕದಲ್ಲಿ ಗ್ರೇಟ್ ಈಸ್ಟರ್ನ್ ಹೋಟೆಲ್‌ನ ಪಾಮ್ ಕೋರ್ಟ್‌ನಿಂದ ನಿರ್ಗಮಿಸುವವರೆಗೂ ಅವರು, ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್‌ನ ಮುಖ್ಯ ತೀರ್ಪುಗಾರರಾಗಿ ಇದ್ದರು. ಐಬಿಎಸ್ಎಫ್ ವರ್ಲ್ಡ್ ಸ್ನೂಕರ್ ಚಾಂಪಿಯನ್‌ಶಿಪ್‌ನ ರೋಲಿಂಗ್ ಟ್ರೋಫಿ, ಎಂಎಂ ಬೇಗ್ ಟ್ರೋಫಿಯನ್ನು ಅವರು ವಿನ್ಯಾಸಗೊಳಿಸಿದ್ದರು. ಅದು ಇಂದಿಗೂ ವಿಶ್ವ ಚಾಂಪಿಯನ್‌ಶಿಪ್‌ನ ಪ್ರತಿಷ್ಠಿತ ರೋಲಿಂಗ್ ಟ್ರೋಫಿಯಾಗಿ ಉಳಿದಿದೆ.