ನವದೆಹಲಿ:ಸಾಲದ ಸುಳಿಯಲ್ಲಿ ಸಿಲುಕಿ ಹೊರಬರಲಾರದೆ ಪರದಾಡುತ್ತಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಇದೀಗ ತನ್ನ ಸಂಪೂರ್ಣ (ಶೇ.100) ಷೇರನ್ನು ಮಾರಾಟ ಮಾಡಲು ಮುಂದಾಗಿದೆ.
2018ರಲ್ಲಿ ಏರ್ ಇಂಡಿಯಾದ ಶೇ. 76ರಷ್ಟು ಪಾಲನ್ನು ಮಾರಾಟ ಮಾಡಲು ಮುಂದಾಗಿ ವಿಫಲವಾಗಿದ್ದ ಕೇಂದ್ರ ಸರ್ಕಾರ, ಇದೀಗ ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡುವುದಾಗಿ ಹೇಳಿದೆ. ಏರ್ ಇಂಡಿಯಾವನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸುವವರು ಮಾರ್ಚ್ 17ರ ಒಳಗಾಗಿ ಸೂಕ್ತ ದಾಖಲೆಗಳನ್ನು ನೀಡಬೇಕೆಂದು ಡೆಡ್ಲೈನ್ ನೀಡಿದೆ.
ಇನ್ನು ಏರ್ ಇಂಡಿಯಾ ಜೊತೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾಗೂ ಶೇ. 50ರಷ್ಟು ಪಾಲುದಾರಿಕೆ ಹೊಂದಿರುವ ಏರ್ ಇಂಡಿಯಾ ಎಸ್ಎಟಿಎಸ್ (AISATS)ಏರ್ಪೋರ್ಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ಅನ್ನು ಕೂಡ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.
ಷರತ್ತು ಅನ್ವಯ:
ಏರ್ ಇಂಡಿಯಾ ಮಾರಾಟದ ಕುರಿತು ಕೆಲವು ಷರತ್ತುಗಳನ್ನು ಹೇರಿರುವ ಸರ್ಕಾರ, ಏರ್ ಇಂಡಿಯಾವನ್ನು ಖರೀದಿಸುವವರು 23,286.5 ಕೋಟಿ ರೂ. ಸಾಲದ ಹೊರೆಯನ್ನು ಹೊರಬೇಕಾಗುತ್ತದೆ. ಹಾಗೂ ಏರ್ ಇಂಡಿಯಾದ ಮಾಲೀಕತ್ವ ಮತ್ತು ಆಡಳಿತವನ್ನು ಭಾರತೀಯ ಸಂಸ್ಥೆಯೇ ವಹಿಸಿಕೊಳ್ಳಬೇಕು. ಯಾವುದೇ ವಿದೇಶಿ ಕಂಪನಿಗಳಿಗೆ ಆದ್ಯತೆ ಇಲ್ಲ ಎಂದು ತಿಳಿಸಿದೆ.