ನವದೆಹಲಿ: ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎನ್ಡಿಎ ಸರ್ಕಾರವನ್ನು ದೂಷಿಸುತ್ತಿರುವ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಈ ವಿಷಯವನ್ನಿಟ್ಟುಕೊಂಡು ರೈತರ ನಿಜವಾದ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರೈತರ ಟ್ರ್ಯಾಕ್ಟರ್ ರ‍್ಯಾಲಿಯ ವೇಳೆ ನಡೆದ ಹಿಂಸಾಚಾರವನ್ನಿಟ್ಟುಕೊಂಡು ಅವರ ಚಳವಳಿಯನ್ನು ನಿಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಬಹುಪಾಲು ರೈತರು ನಿಗದಿತ ಮಾರ್ಗದಲ್ಲಿಯೇ ಟ್ರ್ಯಾಕ್ಟರ್ನೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಆದರೆ, ಕೆಲವೇ ರೈತರಿಗೆ ಮಾತ್ರ ಬೇರೆ ಮಾರ್ಗದಲ್ಲಿ ಹೋಗಲು ಅನುಮತಿ ನೀಡಲಾಗಿದೆ, ಇದರಿಂದ ಅಹಿತಕರ ಘಟನೆ ನಡೆಯಿತು. ಪೊಲೀಸರು ಸೂಚಿಸಿದ ಮಾರ್ಗದಲ್ಲಿಯೇ ಲಕ್ಷಾಂತರ ರೈತರು ಟ್ರ್ಯಾಕ್ಟರ್ಗಳೊಂದಿಗೆ ಶಾಂತಿಯುತವಾಗಿ ಹೋಗುತ್ತಿದ್ದರು ಎಂದು ಯೆಚೂರಿ ಹೇಳಿದ್ದಾರೆ.
ಕೆಲವು ರೈತರು ನಿಗದಿತ ಮಾರ್ಗದಿಂದ ಬೇರೆ ಕಡೆ ಹೋಗಲು ಹೇಗೆ ಅನುಮತಿ ಪಡೆದರೋ ಗೊತ್ತಿಲ್ಲ. ಅಲ್ಲದೇ ಅವರು ದೆಹಲಿಯನ್ನು ಹೇಗೆ ತಲುಪಿದರು ಎಂಬುದು ತಿಳಿದಿಲ್ಲ. ಬಳಿಕ ಕೆಂಪು ಕೋಟೆಗೆ ಬಂದು ತ್ರಿವರ್ಣದ ಬಳಿ ಮತ್ತೊಂದು ಧ್ವಜವನ್ನು ಹಾರಿಸಿದರು ಎಂದು ಯೆಚೂರಿ ಹೇಳಿದ್ದಾರೆ.