ಮುಂಬೈ: ಕೊರೊನಾ ಪ್ರಭಾವದಿಂದ ಸದ್ಯ ದೇಶದಲ್ಲಿ ಲಾಕ್‌ಡೌನ್ ಆರಂಭವಾಗಿದ್ದು, ಇನ್ನೂ 16 ದಿನ ಹೀಗೆ ಮುಂದುವರೆಯುತ್ತೆ. ಇಂತ ಪರಿಸ್ಥಿತಿಯಲ್ಲಿ ಕನಿಷ್ಠ ಸಂಜೆ ವೇಳೆಯಾದ್ರೂ ವೈನ್ ಶಾಪ್‌ಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಲೈಸೆನ್ಸ್ ಇರುವ ಬಾರ್, ವೈನ್ ಶಾಪ್‌ಗಳಿಗಾದ್ರೂ ಅನುಮತಿ ನೀಡಿದ್ರೆ ಚೆನ್ನಾಗಿರುತ್ತೆ. ನನ್ನ ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ಯಾಕೆಂದರೆ ಈಗಾಗಲೇ ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಾಗುತ್ತಿದೆ. ಅಬಕಾರಿ ಇಲಾಖೆಯಿಂದ ಸರ್ಕಾರಗಳಿಗೆ ಬರುವ ಆದಾಯ ಕೂಡ ಅವಶ್ಯಕವಾಗಿದೆ. ಪ್ರಸ್ತುತ ಸಮಾಜದಲ್ಲಿ ಎಲ್ಲಾ ಮದ್ಯ ಸೇವನೆ ಕಾನೂನುಬದ್ಧವಾಗಿದೆ ಅನ್ನೋದು ನನ್ನ ಅಭಿಪ್ರಾಯ ಅಂತ ನಟ ರಿಷಿ ಕಪೂರ್ ಹೇಳಿದ್ದಾರೆ.
ರಿಷಿ ಕಪೂರ್ ಟ್ವೀಟ್‌ಗೆ ನಿರ್ದೇಶಕ ಕಂ ನಿರ್ಮಾಪಕ ಕುನಾಲ್ ಕೊಹ್ಲಿ ಸಹಮತ ವ್ಯಕ್ತಪಡಿಸಿದ್ದು, ಒಂದು ವೇಳೆ ಅದು ಸಾಧ್ಯವಾಗದಿದ್ರೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆಯಾದ್ರೂ ಮದ್ಯದಂಗಡಿ ತೆರೆದರೆ ಚೆನ್ನಾಗಿರುತ್ತೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ರಿಷಿ ಕಪೂರ್, ಭಾರತವನ್ನ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿ ಎಂದಿದ್ದರು. ಇದೇ ವಿಷಯವನ್ನಿಟ್ಟುಕೊಂಡು ಬಾಲಿವುಡ್ ಹಿರಿಯ ನಟನ ವಿರುದ್ಧ ನೆಟಿಜನ್ಸ್ ಆಕ್ರೋಶ ಹೊರಹಾಕಿದ್ದರು.
ಆದ್ರೆ ಈ ಪೋಸ್ಟ್‌ಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದು, ಮದ್ಯ ಸೇವನೆಯಿಂದ ಮಹಿಳೆಯರನ್ನು ಅವರ ಗಂಡಂದಿರು ಹಿಂಸೆ ನೀಡುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಇಂತ ಚರ್ಚೆಗಳು ಅವಶ್ಯಕತೆ ಇದಿಯಾ ಅಂತ ಪ್ರಶ್ನಿಸಿದ್ದಾರೆ.