ನವದೆಹಲಿ:ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿಂತೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದ್ದು, ಇದೇ ವೇಳೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 6.84 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ತಿಳಿಸಿದೆ.
ಸಂಸತ್ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್, 'ಒಟ್ಟು 38.02 ಲಕ್ಷ ಅನುಮೋದಿತ ಹುದ್ದೆಗಳಲ್ಲಿ 2018ರ ಮಾರ್ಚ್ ವೇಳೆಗೆ 31.18 ಲಕ್ಷ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಾಲಾಗಿದೆ. 6.84 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ' ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ನಿವೃತ್ತಿ, ಸಾವು, ಬಡ್ತಿ ಮತ್ತು ಇತರೆ ಕಾರಣಗಳಿಂದ ಹುದ್ದೆಗಳು ಖಾಲಿ ಆಗುತ್ತಿವೆ. ಖಾಲಿ ಇರುವ ಹುದ್ದೆಗಳಿಗೆ ಸಂಬಂಧಪಟ್ಟ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಿಬ್ಬಂದಿ ನೇಮಕ ಆಯೋಗದ ರೂಪಿತ ಯೋಜನೆಯ ಅನ್ವಯ, 2019-2020ರ ಅವಧಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿವಿಧ ಸಚಿವಾಲಯಗಳ ವತಿಯಿಂದ ನೇಮಕಾತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ವೇಳೆ 1,03,266 ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಭಾರತೀಯ ರೈಲ್ವೆ ಮಂಡಳಿಯು 2018-19ರಲ್ಲಿ ಹೊಸ ಉದ್ಯೋಗಗಳ ನೇಮಕಾತಿಯ ಅಧಿಸೂಚನೆಗಳನ್ನು ಹೊರಡಿಸಿದೆ. ಮುಂದಿನ ಎರಡು ವರ್ಷಗಳಲ್ಲಿ 1,56,138 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತದೆ ಎಂದರು.