ನವದೆಹಲಿ:ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೇಂದ್ರ ಸರ್ಕಾರ ನೀಡಿದ್ದ ವಿಶೇಷ ಭದ್ರತೆ ವ್ಯವಸ್ಥೆಯನ್ನು (ಎಸ್‍ಪಿಜಿ) ಹಿಂಪಡೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಈಗಾಗಲೇ ನಡೆದ ಗೃಹ ಸಚಿವಾಲಯದ ವಾರ್ಷಿಕ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಎಸ್‍ಪಿಜಿ ಭದ್ರತೆಯನ್ನು ಹಿಂಪಡೆದುಕೊಂಡು, Z+ ಪ್ಲಸ್ ಭದ್ರತೆ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್‍ಪಿಜಿ ಭದ್ರತೆಯನ್ನು ಈಗಾಗಲೇ ಹಿಂಪಡೆದುಕೊಳ್ಳಲಾಗಿದೆ. ಇದೀಗ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾಗೆ ಯಾವುದೇ ಜೀವ ಬೆದರಿಕೆ ಇಲ್ಲ ಎಂಬ ವರದಿಯನ್ನು ಗುಪ್ತಚರ ಇಲಾಖೆ ನೀಡಿರುವ ಕಾರಣ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ವಿಶೇಷವೆಂದರೆ ಕಳೆದ ಅನೇಕ ವರ್ಷಗಳ ಕಾಲ ಅನಾರೋಗ್ಯ ಸಮಸ್ಯೆಗೆ ಒಳಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೊನೆಯವರೆಗೂ ಎಸ್‍ಪಿಜಿ ಭದ್ರತೆ ನೀಡಲಾಗಿತ್ತು.
ಕಾಂಗ್ರೆಸ್ ಪ್ರತಿಭಟನೆ
ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ವಾದ್ರಾಗೆ ನೀಡಲಾಗಿದ್ದ ವಿಶೇಷ ಭದ್ರತೆ ಹಿಂಪಡೆದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕರ್ತರು ಗೃಹ ಸಚಿವ ಅಮಿತ್ ಶಾ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ. ಇಂತಹ ವಿಚಾರಗಳಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿತು.
ಇದೇ ವಿಚಾರವಾಗಿ ಮಾತನಾಡಿರುವ ಕೆ.ಸಿ. ವೇಣುಗೋಪಾಲ್, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಇಂತಹ ಕೆಟ್ಟ ರಾಜಕಾರಣ ಮಾಡುತ್ತಿದೆ. ಈಗಾಗಲೇ ದೇಶದ ಇಬ್ಬರು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಕೊಲೆಯಾಗಿದ್ದು, ಇದರ ಮಧ್ಯೆ ಸೋನಿಯಾಜೀ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಗೆ ನೀಡಿದ್ದ ಭದ್ರತೆ ಹಿಂಪಡೆದುಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್
ಇಷ್ಟು ವರ್ಷ ತಮಗೆ, ಹಾಗೂ ತಮ್ಮ ಕುಟುಂಬಕ್ಕೆ ಭದ್ರತೆ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದು, ರಕ್ಷಣೆ ನೀಡಿದ್ದಕ್ಕಾಗಿ ಎಸ್‍ಪಿಜಿ ಅಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.