ನವದೆಹಲಿ:ಕೇಂದ್ರ ಸರ್ಕಾರ ರೂಪಿಸಿದ ನೀತಿಗಳಿಂದಾಗಿ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು ಕಾಂಗ್ರೆಸ್ ಪಕ್ಷ ಯುವಜನರಿಗೆ ಉದ್ಯೋಗ ಒದಗಿಸುವ ಸಲುವಾಗಿ ಆರಂಭಿಸಿರುವ ''ಸ್ಪೀಕ್ ಅಪ್ ಫಾರ್ ಜಾಬ್ಸ್'' (ಉದ್ಯೋಗಗಳಿಗಾಗಿ ಮಾತನಾಡಿ) ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಯಿಂದ 10 ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು, 'ಮೋದಿ ಸರ್ಕಾರದ ನೀತಿಗಳಿಂದಾಗಿ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ. ಇದು ಐತಿಹಾಸಿಕ ಪತನ ಎಂದು ಟ್ವೀಟ್ನಲ್ಲಿ ಆರೋಪಿಸಿದ್ದಾರೆ.
ಇದರ ಜೊತೆಗೆ ಭಾರತದ ಯುವಜನತೆಯ ಭವಿಷ್ಯವನ್ನು ಸರ್ಕಾರ ಹತ್ತಿಕ್ಕಿದ್ದು, ಯುವಜನತೆಯ ಧ್ವನಿಯನ್ನು ಸರ್ಕಾರ ಕೇಳುವಂತೆ ಮಾಡೋಣ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತೀ ವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆರು ವರ್ಷಕ್ಕೆ 12 ಕೋಟಿ ಉದ್ಯೋಗ ನೀಡುವ ಬದಲು 14 ಕೋಟಿ ಉದ್ಯೋಗಗಳನ್ನು ಕಸಿದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.