ಲಖನೌ: ಚೀನಾದ ಗಡಿಯಲ್ಲಿ ಉದ್ವಿಗ್ನತೆ ಇರುವ ಸಮಯದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳು ಪ್ರಬುದ್ಧತೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಜೂನ್ 15ರಂದು ಲಡಾಖ್‌ನಲ್ಲಿ ಚೀನಾದ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ಘಟನೆಯಿಂದ ಇಡೀ ದೇಶ ದುಃಖ ಮತ್ತು ಕೋಪಗೊಂಡಿದೆ ಎಂದು ಮಾಯಾವತಿ ಹೇಳಿದ್ದಾರೆ.
'ಸರ್ಕಾರ ಮತ್ತು ಪ್ರತಿಪಕ್ಷಗಳು ಸಂಪೂರ್ಣ ಪ್ರಬುದ್ಧತೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಈ ಮೂಲಕ ಇಡೀ ದೇಶ ಮತ್ತು ಜಗತ್ತಿಗೆ ಪರಿಣಾಮಕಾರಿ ಸಂದೇಶ ನೀಡಲು ಸಾಧ್ಯ' ಎಂದು ಟ್ವೀಟ್ ಮಾಡಿದ್ದಾರೆ.
ಇಂತಹ ಕಷ್ಟ ಮತ್ತು ಸವಾಲಿನ ಸಮಯದಲ್ಲಿ ಭಾರತ ಸರ್ಕಾರದ ಮುಂದಿನ ಕ್ರಮಗಳಿಗೆ ಸಂಬಂಧಿಸಿದಂತೆ ಜನರು ಮತ್ತು ತಜ್ಞರ ಅಭಿಪ್ರಾಯ ವಿಭಿನ್ನವಾಗಿರಬಹುದು. ಆದರೆ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಗಡಿ ವಿಚಾರದಲ್ಲಿ ಸರ್ಕಾರವೇ ನಿರ್ಣಯ ತೆಗೆದುಕೊಳ್ಳಬೇಕು ಎಂದಿದ್ದಾರೆ.