ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಮಧ್ಯೆ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ಸಂಘಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. "ನಾವು ಮುಂದಿನ ಸುತ್ತಿನ ಮಾತುಕತೆಗಳನ್ನು ಡಿಸೆಂಬರ್ 3 ರಂದು ನಡೆಸಲು ನಿರ್ಧರಿಸಿದ್ದೇವು. ಆದರೆ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕೋವಿಡ್ ಪರಿಸ್ಥಿತಿ ಮತ್ತು ಚಳಿಗಾಲದ ಕಾರಣ ನಾವು ಡಿಸೆಂಬರ್ 3ಕ್ಕೂ ಮೊದಲು ಮಾತನಾಡಬೇಕು ಮತ್ತು ಪರಿಸ್ಥಿತಿಯನ್ನು ಪರಿಹರಿಸಬೇಕು ಎಂದು ನಿರ್ಧರಿಸಿದ್ದೇವೆ. ಅದಕ್ಕಾಗಿಯೇ ಡಿಸೆಂಬರ್ 1 ರಂದು ವಿಜ್ಞಾನ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ, ಮೊದಲ ಸುತ್ತಿನ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕಿಸಾನ್ ಯೂನಿಯನ್‌ಗಳನ್ನು ಆಹ್ವಾನಿಸಲಾಗಿದೆ" ಎಂದು ತಿಳಿಸಿದ್ದಾರೆ.
ಹೊಸದಾಗಿ ಜಾರಿಗೆ ಬಂದ ಕೃಷಿ ಕಾನೂನುಗಳ ಬಗ್ಗೆ ರೈತರು ಕೆಲವು ತಪ್ಪು ತಿಳುವಳಿಕೆಯಲ್ಲಿದ್ದಾರೆ. ಸರ್ಕಾರದೊಂದಿಗೆ ಮೊದಲ ಸುತ್ತಿನ ಸಭೆಯಲ್ಲಿ ಹಾಜರಿದ್ದ ಕಿಸಾನ್ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ತೋಮರ್ ಹೇಳಿದರು.
"ಮೋದಿಜಿ ನಾಯಕತ್ವದಲ್ಲಿ, ಕಳೆದ ಆರು ವರ್ಷಗಳಲ್ಲಿ, ರೈತರ ಆದಾಯ ಹೆಚ್ಚಳಕ್ಕಾಗಿ ಅನೇಕ ಐತಿಹಾಸಿಕ ಕೆಲಸಗಳನ್ನು ಮಾಡಲಾಯಿತು. ಹೊಸ ಕೃಷಿ ತಿದ್ದುಪಡಿ ಕಾನೂನುಗಳು ಬಂದಾಗ, ರೈತರ ಮನಸ್ಸಿನಲ್ಲಿ ಕೆಲವು ಅನುಮಾನಗಳಿವೆ. ನಾವು ಕಿಸಾನ್ ಯೂನಿಯನ್‌ಗಳೊಂದಿಗೆ ಅಕ್ಟೋಬರ್ 14 ರಂದು ಕಾರ್ಯದರ್ಶಿ ಮಟ್ಟದಲ್ಲಿ ಮತ್ತು ನವೆಂಬರ್ 13 ರಂದು ನಾನು ಮತ್ತು ಪಿಯೂಷ್ ಗೋಯಲ್ ಮಾತುಕತೆ ನಡೆಸಿದ್ದೇವೆ" ಎಂದು ತೋಮರ್ ಹೇಳಿದ್ದಾರೆ.
ಈ ಮೊದಲು ಮಾತುಕತೆಗೆ ಕರೆದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಅವರ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದರು. ಯಾವುದೇ ಷರತ್ತುಬದ್ಧ ಚರ್ಚೆಯ ಆಹ್ವಾನ ಸ್ವೀಕರಿಸುವುದಿಲ್ಲ ಎಂದು ಹೇಳಿದ ರೈತರು, ರಾಷ್ಟ್ರ ರಾಜಧಾನಿ ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.