ನವದೆಹಲಿ: ಮಾರಕ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತದಲ್ಲಿ 21 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿದ್ದು, ಮನೆ ಬಿಟ್ಟು ಹೊರ ಬಾರದಂತೆ ಜನರಲ್ಲಿ ಮನವಿ ಮಾಡಲಾಗಿದೆ. ಈ 21 ದಿನ ಏನು ಮಾಡಬೇಕೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಸಲಹೆಗಳನ್ನು ನೀಡಲಾಗುತ್ತಿದೆ.
ಸರ್ಕಾರವು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಮನೆಯಲ್ಲಿಯೇ ಇರಲು ಪ್ರೇರೇಪಿಸುತ್ತಿವೆ. ಹೊಸ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಕೆಟ್ಟ ಅಭ್ಯಾಸಗಳನ್ನು ತೊಡೆದುಹಾಕಲು ತಮ್ಮ ಸಮಯ ಬಳಸಿಕೊಳ್ಳುವ ಮಾರ್ಗಗಳನ್ನು ಸೂಚಿಸಲಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಐಬಿ ಇಂಡಿಯಾ 'ಮುಂದಿನ 21 ದಿನಗಳವರೆಗೆ ಇಂದಿನಿಂದ ಪ್ರಾರಂಭಿಸಿ ಸರಳವಾದ ಹೊಸ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದು, ಉದಾಹರಣೆಗೆ ಬೇಗನೆ ಎಚ್ಚರಗೊಳ್ಳುವುದು, ಹೊಸ ಆಹಾರಕ್ರಮಕ್ಕೆ ಬೆಳೆಸಿಕೊಳ್ಳುವುದು, ಧ್ಯಾನ ಮಾಡುವುದು ಇತ್ಯಾದಿಗಳನ್ನು ಬೆಳೆಸಿಕೊಳ್ಳಿ ಎಂದಿದೆ.
ಮತ್ತೊಂದು ಟ್ವೀಟ್‌ನಲ್ಲಿ, '21 ದಿನಗಳಲ್ಲಿ ಉತ್ತಮ ಅಭ್ಯಾಸಗಳನ್ನು ರುಢಿಸಿಕೊಳ್ಳುವುದು ಮಾತ್ರವಲ್ಲ, ಕೆಟ್ಟ ಅಭ್ಯಾಸಗಳನ್ನು ತೊಡೆದುಹಾಕಲು ನೀವು ಇದನ್ನು ಬಳಸಬಹುದು' ಎಂದು ಹೇಳಿದೆ.
ಯೋಗ ಅಥವಾ ಜರ್ಮನ್ ಭಾಷೆಯನ್ನು ಕಲಿಯುವ ಮೂಲಕ ಈ ಅವಧಿಯಲ್ಲಿ ತಮ್ಮ ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದರ ಕುರಿತು ಜನರಿಗೆ ಮಾರ್ಗಗಳನ್ನು ಸೂಚಿಸಲಾಗುತ್ತಿದೆ. ಸಾಮಾಜಿಕ ಅಂತರವನ್ನು ಅಭ್ಯಾಸ ಮಾಡಿಕೊಳ್ಳುವಂತೆ ಜನರನ್ನು ಒತ್ತಾಯಿಸಲಾಗುತ್ತಿದ್ದು, ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಇತರ ಕ್ರಮಗಳನ್ನು ಸೂಚಿಸಲಾಗುತ್ತಿದೆ.