ನವದೆಹಲಿ:ಕೋವಿಡ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ಕೇಂದ್ರ ಸರ್ಕಾರವು 12,000 ಕೋಟಿ ರೂ.ಗಳನ್ನು 50 ವರ್ಷಗಳ ಬಡ್ಡಿರಹಿತ ಸಾಲವನ್ನು ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ 43ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೀತಾರಾಮನ್, ಮೂಲಸೌಕರ್ಯಕ್ಕಾಗಿ ಮತ್ತು ಆಸ್ತಿ ಸೃಷ್ಟಿಗೆ (asset creation) ಖರ್ಚು ಮಾಡುವ ಹಣ - ಈ ರೀತಿಯ ಬಂಡವಾಳ ಹೂಡಿಕೆಯು ಆರ್ಥಿಕತೆಯ ಮೇಲೆ ನಾನಾ ಪರಿಣಾಮಗಳನ್ನು ಬೀರುತ್ತದೆ. ಇದು ಇಂದಿನ ಹಾಗೂ ಭವಿಷ್ಯದ ಜಿಡಿಪಿ (ಆರ್ಥಿಕ ವೃದ್ಧಿ ದರ)ಯನ್ನು ಸುಧಾರಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರದ ಬಂಡವಾಳ ಹೂಡಿಕೆಗೆ ಒತ್ತು ನೀಡಲು ನಾವು ಬಯಸುತ್ತೇವೆ. ಹೀಗಾಗಿ 12,000 ಕೋಟಿ ರೂ.ಗಳನ್ನು ರಾಜ್ಯಗಳಿಗೆ 50 ವರ್ಷಗಳ ವರೆಗೆ ಬಡ್ಡಿರಹಿತ ವಿಶೇಷ ಸಾಲವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಾಲವನ್ನು ಮೂರು ಹಂತಗಳಲ್ಲಿ ನೀಡಲಾಗುವುದು. ಮೊದಲ ಹಂತದಲ್ಲಿ 8 ಈಶಾನ್ಯ ರಾಜ್ಯಗಳಿಗೆ ತಲಾ 200 ಕೋಟಿ ರೂ. ಮತ್ತು ಉತ್ತರಾಖಂಡ, ಹಿಮಾಚಲ ಪ್ರದೇಶಕ್ಕೆ ತಲಾ 450 ಕೋಟಿ ರೂ. ನೀಡಲಾಗುವುದು. ಎರಡನೇ ಹಂತದಲ್ಲಿ, 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಉಳಿದ ರಾಜ್ಯಗಳಿಗೆ 7,500 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಮೂರನೇ ಹಂತದಲ್ಲಿ ಆತ್ಮನಿರ್ಭರ ಪ್ಯಾಕೇಜ್‌ನಲ್ಲಿ ಆರ್ಥಿಕ ಬೆಳವಣಿಗೆಗಾಗಿ ಕನಿಷ್ಠ ಮೂರು ಪೂರಕ ಕ್ರಮಗಳನ್ನು ಕೈಗೊಂಡ ರಾಜ್ಯಕ್ಕೆ 2,000 ಕೋಟಿ ರೂ. ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.