ನವದೆಹಲಿ: ಪ್ರತಿಭಟನಾ ನಿರತ ರೈತ ಮುಖಂಡರು ಮತ್ತು ಕೇಂದ್ರ ಸಚಿವ ಅಮಿತ್ ಶಾ ನಡುವೆ ಮಂಗಳವಾರ ಸಂಜೆ ನಡೆದ ಸಭೆಯು ಕೃಷಿ ಕಾನೂನುಗಳ ವಿವಾದ ಪರಿಹರಿಸುವಲ್ಲಿ ವಿಫಲವಾಗಿದೆ. 'ವಿವಾದಾತ್ಮಕ ಕೃಷಿ ಕಾಯ್ದೆಗಳ ತಿದ್ದುಪಡಿಗೆ ರೈತರು ಇರಿಸಿದ್ದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ' ಎಂದು ಮುಖಂಡರು ಆಪಾದಿಸಿದ್ದಾರೆ.
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ರೈತರ ನಡುವೆ ನಡೆಯಬೇಕಿದ್ದ ಸಭೆ ಒಂದು ದಿನ ಮೊದಲೇ ರದ್ದಾಗಿದೆ. 'ಬುಧವಾರ ಯಾವುದೇ ಸಭೆ ನಡೆಯುವುದಿಲ್ಲ. ರೈತರು ಎಷ್ಟೇ ಪ್ರತಿಪಾದಿಸಿದ್ದರೂ ವಿವಾದಾತ್ಮಕ ಕೃಷಿ ಕಾನೂನುಗಳನ್ನು ತೆಗೆದುಹಾಕಲು ಸರ್ಕಾರಕ್ಕೆ ಮನಸ್ಸಿಲ್ಲ' ಎಂದು ಅಖಿಲ ಭಾರತ ಕಿಸಾನ್ ಸಭೆಯ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಮಂಗಳವಾರ ರಾತ್ರಿ ಹೇಳಿದ್ದಾರೆ.