ನವದೆಹಲಿ:ಕೇಂದ್ರ ಸರ್ಕಾರವು ಕೋವಿಡ್ ಲಸಿಕೆಗಾಗಿ ಬರೋಬ್ಬರಿ 50 ಸಾವಿರ ಕೋಟಿ ರೂ.($7 ಬಿಲಿಯನ್) ಮೀಸಲಿಟ್ಟಿದೆ ಎಂಬ ವರದಿ ತಿಳಿದು ಬಂದಿದ್ದು, ಪ್ರತಿ ವ್ಯಕ್ತಿಗೆ 400ರಿಂದ 500 ($ 6- $ 7) ರೂ ಖರ್ಚು ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ಚೀನಾ ಹೊರತುಪಡಿಸಿ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣ ಲಸಿಕೆ ಖರೀದಿಗೋಸ್ಕರ ಸುಮಾರು 50 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಇದರಲ್ಲಿ 30 ಕೋಟಿ ಉಚಿತ ಲಸಿಕೆ ನೀಡಲು ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ. ಮುಂದಿನ ವರ್ಷ ಮಾರ್ಚ್ 31ರವರೆಗೆ ಈ ಹಣ ಮೀಸಲಿಟ್ಟಿದೆ.
ಭಾರತದಲ್ಲಿ ಪ್ರತಿ ವ್ಯಕ್ತಿಗೆ ಎರಡು ಚುಚ್ಚುಮದ್ದಿಗೋಸ್ಕರ 200ರಿಂದ 250ರೂ. ಬಳಕೆ ಎಂದು ಅಂದಾಜಿಸಲಾಗಿದೆ. ಆದರೆ ಮೂಲಸೌಕರ್ಯ ವೆಚ್ಚ, ಶೇಖರಣೆ ಮತ್ತು ಸಾರಿಗೆ ಸೇರಿ 450ರಿಂದ 500ರೂ. ನಿಗದಿಪಡಿಸಲಾಗಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಮುಂದಿನ ತಿಂಗಳಿಂದ ಕೇಂದ್ರ ಸರ್ಕಾರ ಮತ್ತಷ್ಟು ಸಡಿಲಿಕೆ ನೀಡುವ ಸಾಧ್ಯತೆ ದಟ್ಟವಾಗಿದೆ.
ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದ ನರೇಂದ್ರ ಮೋದಿ ಕೋವಿಡ್-19 ಲಸಿಕೆ ಸಿದ್ಧವಾದ ತಕ್ಷಣವೇ ಎಲ್ಲ ಭಾರತೀಯರಿಗೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ. ಇನ್ನು ಬಿಹಾರದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತವಾಗಿ ಅಲ್ಲಿನ ಜನರಿಗೆ ಕೋವಿಡ್ ಲಸಿಕೆ ನೀಡುವ ಭರವಸೆ ನೀಡಲಾಗಿದೆ.